ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಅಳಗುಂಡಿ ಅಂದಾನಯ್ಯ' ಅವರ ಕವನ..
ಅವ್ವ; ಅದೊಂದು ಅಂತಃಕರಣದ ಆಪ್ತ ಲೋಕ.
ಜಗದಗಲ ಮುಗಿಲಗಲ ಇನ್ನೂ ಅತ್ತತ್ತ ಅಗಲ.
ಅವ್ವ; ಅನೂಹ್ಯ ಪ್ರೇಮ ಲೋಕ.
ಅವ್ವ; ನನ್ನವ್ವ ಭೂಮಿ ತಾಯವ್ವ.
ಅವ್ವ;ಲೋಕೋದ್ಧಾರರನ್ನು ಹೆತ್ತು,ಹೊತ್ತು,
ತುತ್ತು ಹಾಕಿ, ಸಾಕಿ ಸಲುಹಿದಾಕಿ.
ಅವ್ವ; ಆಕಿಯ ಕುರಿತು ಹೇಳಿದಷ್ಟೂ 'ಬಾಕಿ'
ಉಳಿದೇ ಉಳಿಯುತ್ತದೆ! ಎಲ್ಲರೆದೆಯೊಳಗೆ.
ಹೇಳದೇ ಉಳಿದಿದ್ದು ತುಂಬಿ ಚೆಲ್ಲಿದೆ;
ಈ ಜಗದೊಳಗೆ, ಹೂ ಹಣ್ಣು,ಗಂಧ ಗಾಳಿಯೊಳಗೆ.
ಜಲದ ಜುಳುಜುಳು ನಾದದೊಳಗೆ.
ನಗುವ ಮಗುವ ಕಣ್ಣಿನೊಳಗೆ.
ಹಕ್ಕಿ ಪಕ್ಷಿಗಳ ಹಾಡಿನೊಳಗೆ.
ಹೀಗೆ.. ಅವ್ವನ ಅನನ್ಯ ಅನುರಾಗದ ರಾಗ ರಂಜಿತ, ಅನುಪಮ ವ್ಯಕ್ತತ್ವ ಜಗದುದ್ದಕೂ ಹಂಚಿಹೋಗಿದೆ.
ಅವ್ವ; ಮಿಂಚಂತೆ "ಮಾತ್ರ" ತೋರಿದ ಬೆಳಕೇ!
ಆ ಮಿಂಚಿನ ಕೊನೆಯಂಚಿನ ಹೊಳೆದ ಆ ಬೆಳಕೇ
ಅವ್ವನ ಕಣ್ಮನಗಳೊಳಗೆ ಸೇರಿ ವಾತ್ಸಲ್ಯ ವಾಗಿದೆ!!
ಹಾಗಾಗಿ,
ಅವ್ವ; ಎಂಬುದು ಎಲ್ಲರೆದೆಯ ಉಸಿರಾಗಿದೆ.
ಜಗದೊಳಗೆ ಆ ಹೆಸರಿನ್ನೂ ಇನ್ನೂ ಹಸಿರಾಗಿದೆ!
ಈ ಜಗದೊಳಗೆ; ಹಿಂದೆ,ಮುಂದೆ ಎಂದೆಂದೂ ..
ಅವ್ವ; ಅನ್ನುವುದೇ ಲೋಕಕ್ಕಿಟ್ಟ
ಮೊಟ್ಟಮೊದಲ ಹೆಸರಾಗಿದೆ.
No comments:
Post a Comment