Monday, October 30, 2017

ಸರ್ವಜ್ಞನ ವಚನಗಳು..


ಸರ್ವಜ್ಞ ಒಂದು ಸ್ಥಳದಲ್ಲಿ ನಿಲ್ಲದೆ ಸದಾ ಸಂಚರಿಸುತ್ತಾ ಸಮಾಜದ ಎಲ್ಲಾ ಬಗೆಯ ಅಂಕುಡೊಂಕುಗಳನ್ನು ಒರೆ ಹಚ್ಚಿ ಅದಕ್ಕೊಂದು ಪರಿಹಾರ ಕೊಡುತ್ತಾ ತಮ್ಮ ವಚನಗಳಲ್ಲಿ  ತುಂಬಾ ಸರಳವಾಗಿ ಬಿಡಿಸಿಬಿಟ್ಟಿದ್ದಾರೆ.

ಇವರ ವಚನಗಳು ತುಂಬಾ ಸರಳವಾಗಿದ್ದು , ಜನಸಾಮನ್ಯರಿಗೆ ಸುಲಭವಾಗಿ ಅರ್ಥವಾಗುತ್ತದೆ. ಸರ್ವಜ್ಞನ ತ್ರಿಪದಿಗಳು ಜನರ ಬಾಯಲ್ಲಿ ಗಾದೆ ಮಾತುಗಳಾಗಿ ನೆಲೆ ನಿಂತಿವೆ. ಸರ್ವಜ್ಞ ಕನ್ನಡ ನಾಡಿನ ಕವಿಗಳಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಲ್ಲಾ ವಿಷಯಗಳು ಇವರ ತ್ರಿಪದಿಯಲ್ಲಿ ಅಡಕವಾಗಿವೆ (ತ್ರಿಪದಿಗಳೆಂದರೆ ಮೂರು ಸಾಲಿನ ವಚನಗಳು). 

ಸರ್ವಜ್ಞ (ಸಂಸ್ಕೃತದಲ್ಲಿ ಎಲ್ಲವನ್ನೂ ತಿಳಿದವ ಎನ್ನಲಾಗಿದೆ). ಈತನ ಕಾಲ ಮತ್ತು ಜೀವನಗಳ ಬಗ್ಗೆ ನಿಖರವಾಗಿ ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಈ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತ ಜೀವಿಸಿದ್ದ ಕಾಲ ಸುಮಾರಾಗಿ 16-17ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪ್ರಾಯಶಃ ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಇವರ ಕಾವ್ಯನಾಮ. 
____________________________________________________________

1. ಅಗ್ಗ ಬಡವಗೆ ಲೇಸು | ಬುಗ್ಗೆಯಗಸಗೆ ಲೇಸು |
ತಗ್ಗಿದ ಗದ್ದೆ ಉಳಲೇಸು, ಜೇಡಂಗೆ |
ಮಗ್ಗ ಲೇಸೆಂದ ಸರ್ವಜ್ಞ ||
ಅರ್ಥ: ಅಗ್ಗವಿದ್ದಂಥ (ವಸ್ತುಗಳು) ಬಡವನಿಗೆ, (ನೀರಿನ) ಬುಗ್ಗೆಯು ಅಗಸನಿಗೆ, ತಗ್ಗಿನಲ್ಲಿದ್ದ ಗದ್ದೆಯು ಬಿತ್ತನೆಯ ಕೆಲಸಕ್ಕೆ ಯೋಗ್ಯವಿರುವಂತೆ ನೇಕಾರನಿಗೆ ಮಗ್ಗವೇ ಲೇಸು. 
__________________________________

2. ಬೇಡಗಡವಿಯ ಚಿಂತೆ | ಆಡಿಂಗೆ ಮಳೆಚಿಂತೆ |
ನೋಡುವ ಚಿಂತೆ ಕಂಗಳಿಗೆ, ಹೆಳವಗೆ |
ದ್ದಾಡುವ ಚಿಂತೆ ಸರ್ವಜ್ಞ ||
ಅರ್ಥ: ಬೇಡನಿಗೆ ಅಡವಿಯ ಚಿಂತೆ, ಆಡಿಗೆ ಮಳೆಯ ಬಯಕೆ, ಕಣ್ಣುಗಳಿಗೆ (ಏನಾದರೂ) ನೋಡುವ ಚಿಂತೆಯಿರುವಂತೆ ಹೆಳವನಿಗೆ ಎದ್ದು ತಿರುಗಾಡುವ ಚಿಂತೆ ಬಿಡದು.
204. ಬೇಡನೊಳ್ಳಿದನೆಂದು | ಆಡದಿರು ಸಭೆಯೊಳಗೆ |
ಬೇಡ ಬೇಡಿದರೆ ಕೊಡದಿರೆ, ಬಯ್ಗಿಂಗ |
ಗೋಡೆಯನ್ನು ಒಡೆವ ಸರ್ವಜ್ಞ ||
ಅರ್ಥ: ಬೇಡರವನು ಒಳ್ಳೆಯವನೆಂದು ಸಭೆಯಲ್ಲಿ ಹೇಳಬೇಡ. (ಏಕೆಂದರೆ) ಅವನು ಬೇಡಿದ್ದನ್ನು (ನೀನು) ಕೊಡದೆ ಹೋದೆಯಾದರೆ ರಾತ್ರಿಯ ಸಮಯದಲ್ಲಿ ಗೋಡೆಗೆ ಕನ್ನವಿಕ್ಕುವನು.
__________________________________

3. ಹೆಂಡತಿಗೆ ಅಂಜುವ | ಗಂಡನಂ ಏನೆಂಬೆ |
ಹಿಂಡು ಕೋಳಿಗಳ ಮರಿ ತಿಂಬ ನರಿ, ನಾಯಿ |
ಕಂಡೋಡಿದಂತೆ ಸರ್ವಜ್ಞ ||

ಅರ್ಥ: ಹೆಂಡತಿಗೆ ಅಂಜುವಂಥ ಗಂಡನಿಗೆ ಏನೆನ್ನಬೇಕು? ಕೋಳಿಗಳ ಹಿಂಡನ್ನೇ ಮುರಿದು ತಿನ್ನುವ ನರಿಯು ನಾಯಿಯನ್ನು ಕಂಡು ಓಡಿದ ಹಾಗೆಯೇ ಸರಿ. 
__________________________________

4. ವಾಜಿ ಹಾರುವದಲ್ಲ | ತೇಜಿ ಹೇರುವದಲ್ಲ |
ಗಾಜಿನ ಕುಣಿಕೆ ಮಣಿಯಲ್ಲ, ಅತ್ತಿ ಫಲ |
ಬೀಜದೊಳಗಲ್ಲ ಸರ್ವಜ್ಞ ||
ಅರ್ಥ: ಕುದುರೆಯು ಹಾರುವುದಕ್ಕಲ್ಲ, ಭಾರವನ್ನು ಹೊರುವುದಕ್ಕೂ ಅಲ್ಲ. ಗಾಜಿನ ಕುಣಿಕೆಯು ಮಣಿಯೂ ಅಲ್ಲ. (ಅದರಂತೆ) ಅತ್ತಿಯ ಹಣ್ಣು ಬೀಜದೊಳಗೆ ಎಣಿಸಲ್ಪಡುವುದಿಲ್ಲ. 
__________________________________

5. ಗಾಣಿಗನು ಈಶ್ವರ | ಕಾಣನೆಂಬುದು ಸಹಜ |
ಏಣಾಂಕಧರನು, ಧರೆಗಿಳಿಯಲವನಿಂದ |
ಗಾಣವಾಡಿಸುವ ಸರ್ವಜ್ಞ ||
ಅರ್ಥ: ಗಾಣಿಗನು ಈಶ್ವರನನ್ನು ಕಂಡಿಲ್ಲವೆಂಬುದು ನಿಜ; (ಆದರೆ ಒಂದು ವೇಳೆ) ಮಹದೇವನೇ ಅವನ ಬಳಿ ಇರುವುದಾದರೆ (ಗಾಣಿಗನು) ಶಿವನಿಗೂ ಗಾಣ ತಿರುಗಿಸಲು ಹಚ್ಚದೇ ಬಿಡಲಾರನು. 
__________________________________

6. ಹರದನ ಮಾತನ್ನು | ಹಿರಿದು ನಂಬಲು ಬೇಡ |
ಗರಗಸದೊಡನೆ ಮರಹೋರಿ, ತನ್ನ ತಾ |
ನಿರಿದುಕೊಂಡಂತೆ ಸರ್ವಜ್ಞ ||
ಅರ್ಥ: ವ್ಯಾಪಾರಸ್ಥನ ಮಾತಿನಲ್ಲಿ ಹೆಚ್ಚಿನ ನಂಬಿಕೆಯನ್ನಿರಿಸಬೇಡ. (ಒಂದು ವೇಳೆ ಹಾಗೆ ಮಾಡಿದರೆ) ಗರಗಸದೊಂದಿಗೆ ಕಟ್ಟಿಗೆಯ ತುಂಡು ಹೋರಾಡಿ ತನ್ನನ್ನೇ ತಾನು ಇರಿದುಕೊಂಡು ನಾಶವಾದಂತಾಗುತ್ತದೆ. 
__________________________________

7. ಪಂಚಾಳರೈವರು | ವಂಚನೆಗೆ ಗುರುವರು | 
ಕಿಂಚಿತ್ತು ನಂಬಿ ಕೆಡಬೇಡ, ತಿರುಗುಣಿಯ |
ಮಂಡದಂತಿಹರು ಸರ್ವಜ್ಞ ||
ಅರ್ಥ: ಐದು ವಿಧಧ ಪಂಚಾಳರು ವಂಚಕತನದಲ್ಲಿ ಎತ್ತಿದ ಕೈಯಾಗಿರುತ್ತಾರೆ. (ಅದಕ್ಕಾಗಿ ಅವರನ್ನು) ಎಳ್ಳಷ್ಟೂ ನಂಬಿ ಕೆಡಬೇಡ; ಅವರು ತಿರುಗುಣಿಯ ಮಾಡುವಿನಂತಿರುತ್ತಾರೆ. 
__________________________________

8. ಕಳ್ಳನೂ ಒಳ್ಳಿದರೂ | ಎಲ್ಲ ಜಾತೆಯೊಳಿಹರು |
ಕಳ್ಳನೊಂದಡೆ ಉಪಕಾರಿ, ಪಾಂಚಾಳ |
ನೆಲ್ಲರಲಿ ಕಳ್ಳ ಸರ್ವಜ್ಞ ||
ಅರ್ಥ: ಒಳ್ಳೆಯವರು ಹಾಗೂ ಕಳ್ಳವರು ಎಲ್ಲ ಜಾತಿಗಳಲ್ಲಿಯೂ ಇರುತ್ತಾರೆ. (ಕೆಲ ಸಮಯಗಳಲ್ಲಿ) ಕಳ್ಳನಿಂದ ಉಪಕಾರವಾದರೂ ಆಗಬಹುದು. (ಆದರೆ) ಪಂಚಾಳರು (ಬಡಿಗ, ಹಜಾಮ, ಅಗಸ, ನೇಕಾರ, ಮಚೆಗಾರ ಇವರಿಗೆ ಪಂಚಾಳರು ಅನ್ನುತ್ತಾರೆ) ಎಲ್ಲರಿಗಂತ ಹೆಚ್ಚಿನ ಕಳ್ಳರು. 
__________________________________

9. ನಂದಿಯನು ಏರಿದನ | ಚಂದಿರನ ಸೂಡಿದನ |
ಕಂದನ ಬೇಡಿ , ನಲಿದಾನು ನೆನೆವುತ್ತ |
ಮುಂದೆ ಪೇಳುವೆನು ಸರ್ವಜ್ಞ|| 
ಅರ್ಥ: ನಂದಿ ವಾಹನನೂ, ಚಂದ್ರನನ್ನು ತಲೆಯಲ್ಲಿ ಧರಿಸಿದವನೂ ಆದ ಶಂಕರನ ಸುತನನ್ನು , ಗಣಪತಿಯನ್ನು ಪ್ರಾರ್ಥಿಸಿ ಮುಂದಿನ ಪದ್ಯಗಳನ್ನು ಪ್ರಾರ್ಥಿಸುವೆನು.
__________________________________

10. ಎಲುವಿನೀ ಕಾಯಕ್ಕೆ | ಸಲೆ ಚರ್ಮದಾ ಹೊದಿಕೆ |
ಮಲಮೂತ್ರ ಕ್ರಿಮಿಗಳೊಳಗಿರ್ದ, ದೇಹಕೆ |
ಕುಲವಾವುದಯ್ಯ ಸರ್ವಜ್ಞ ||
ಅರ್ಥ: ಚೆನ್ನಾಗಿ ಚರ್ಮದ ಹೊದಿಕೆಯುಳ್ಳ ಎಲುಬಿನ ಹಂದರ ಮತ್ತು ಮಲ - ಮೂತ್ರಾದಿಗಳು ತುಂಬಿಕೊಂಡಿರುವಂಥ ದೇಹಕ್ಕೆ ಕುಲವೆಲ್ಲಿಂದ ಬಂತು ? (ಜಾತಿ ಭೇದವಿಲ್ಲವೆಂಬುದೇ ಈ ಪದದ ಅರ್ಥವಾಗಿದೆ.
__________________________________

11. ಊರಿಂಗೆ ದಾರಿಯನು | ಆರು ತೋರಿದಡೇನು |
ಸಾರಾಯದ ನಿಜವ ತೋರುವ , ಗುರುವು ತಾ |
ನಾರಾದಡೇನು ಸರ್ವಜ್ಞ || 
ಅರ್ಥ: ತನಗೆ ಗೊತ್ತಿಲ್ಲದ ಊರಿನ ದಾರಿಯನ್ನು ಇಂಥವರೇ ತೋರಿಸಬೇಕೆಂಬ ನಿಯಮವಿರುವುದಿಲ್ಲ.ಅಂಥ ಸಮಯದಲ್ಲಿ ಯಾರು ದಾರಿ ತೋರಿಸಿದರೂ ಸರಿಯೇ, ಊರು ತಲುಪುತ್ತಾರೆ.ಅದರಂತೆ ಸತ್ಯದ ಅರಿವನ್ನು ತಿಳಿಸಿಕೊಡುವಂಥ ಗುರುವು ಎಂಥವನಿದ್ದರೇನು ?
__________________________________

12. ಬಂಧುಗಳು ಆದವರು | ಬಂದುಂಡು ಹೋಗುವರು |
ಬಂಧನವ ಕಳೆಯಲರಿಯರು , ಗುರುವಿಂದ |
ಬಂಧುಗಳು ಉಂಟೆ ಸರ್ವಜ್ಞ ||
ಅರ್ಥ: ಬಂಧು-ಬಳಗದವರೆಲ್ಲ ಬಂದು ಊಟಮಾಡಿ ಹೋಗುವುದಕ್ಕಷ್ಟೇ ಹೊರತು ಬಂಧನವನ್ನು ಕಳೆಯಲಾರರು;ಆದರೆ ಎಲ್ಲ ಬಂಧನಗಳನ್ನು ಹೊಡೆದೋಡಿಸುವಂಥ ಶಕ್ತಿಯುಳ್ಳ ಗುರುವಿಗಿಂತ ಹೆಚ್ಚಿನ ಬಂಧುಗಳು ಯಾರಿದ್ದಾರೆ ? (ಯಾರೂ ಇಲ್ಲ). 
__________________________________

13. ತಂದೆಗೂ ಗುರುವಿಗೂ | ಒಂದು ಅಂತರವುಂಟು |
ತಂದೆ ತೋರುವನು ಸದ್ಗುರುವ, ಗುರುರಾಯ |
ಬಂಧನವ ಕಳೆವ ಸರ್ವಜ್ಞ ||
ಅರ್ಥ: ತಂದೆಗೂ ಮತ್ತು ಗುರುವಿಗೂ ಒಂದೇ ಒಂದು ಅಂತರವುಂಟು ಅದೆಂದರೆ ತಂದೆಯು ಒಳ್ಳೆಯ ಗುರುವನ್ನು ತೋರಿಸುತ್ತಾನೆ ಮತ್ತು ಗುರುವರ್ಯನು ಬಂಧನವನ್ನು ಕಳೆಯುತ್ತಾನ.
__________________________________

14. ಗುರು ಮನುಜನೆಂದವಗೆ | ಹರನ ಶಿಲೆಯೆಂದವಗೆ |
ಕರುಣ ಪ್ರಸಾದವನು , ಎಂಜಲೆಂದವಗೆ |
ನರಕ ತಪ್ಪುವದೇ ಸರ್ವಜ್ಞ || 
ಅರ್ಥ: ಗುರುವನ್ನು ಅವನೊಬ್ಬ ಮಾನವನು ಎನ್ನುವವನಿಗೆ , ದೇವದೇವನಾದ ಮಹದೇವನನ್ನು ಶಿಲೆ(ಕಲ್ಲಿನ ಮೂರ್ತಿ)ಎನ್ನುವವನಿಗೆ , ಪ್ರಸಾದವನ್ನು ಎಂಜಲು ಎಂದು ಹೀಯಾಳಿಸುವವನಿಗೆ ನರಕವು ಎಂದಿಗೂ ತಪ್ಪಲಾರದು. 
__________________________________

15. ಎತ್ತಾಗಿ ತೊತ್ತಾಗಿ | ಹಿತ್ತಲದ ಗಿಡನಾಗಿ |
ಮತ್ತೆ ಪಾಪದ ಕೆರನಾಗಿ, ಗುರುವಿನ |
ಹತ್ತಲಿರು ಎಂದ ಸರ್ವಜ್ಞ || 
ಅರ್ಥ: ಯಾವಾಗಲೂ ಗುರುವಿನ ಬಳಿಯಲ್ಲಿಯೇ ಇರು.ಗುರುವನ್ನು ಬಿಟ್ಟು ಅಗಲಬೇಡ.ಗುರುವಿನ ಆಳಾಗಿ ಇಲ್ಲವೇ ಅವನ ಪಾದರಕ್ಷೆಯಾಗಿದ್ದರೂ ಅಡ್ಡಿಯಿಲ್ಲ;ಅವನ ಬಳಿಯೇ ಇರು.
__________________________________

16. ಮೊಸರು ಕಡೆಯಲು ಬೆಣ್ಣೆ | ಯೊಸೆದು ತೋರುವ ತೆರದಿ |
ಹಸನಪ್ಪ ಗುರುವಿನುಪದೇಶದಿಂ , ಮುಕ್ತಿ |
ವಶವಾಗದಿಹುದೆ ಸರ್ವಜ್ಞ || 
ಅರ್ಥ: ಮೊಸರು ಕಡೆದೊಡನೆ ಬೆಣ್ಣೆಯು ಚೆನ್ನಾಗಿ ಗೋಚರವಾಗುವಂತೆ,ಒಳ್ಳೆಯ ಗುರುವಿನ ಉಪದೇಶದಿಂದ ಮುಕ್ತಿಯು ದೊರೆಯದೆ ಇರಲಾರದು.
__________________________________

17. ಹಂದಿ ಚಂದನದ | ಸುಗಂಧವನು ಬಲ್ಲುದೆ |
ಒಂದನು ತಿಳಿಯಲರಿಯದ , ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ || 
ಅರ್ಥ: ಹಂದಿಯಂಥ ಕ್ಷುದ್ರಪ್ರಾಣಿಯು ಸುಗಂಧದ ಪರಿಮಳವನ್ನು ಅರಿಯಲಾರದು.ಅದರಂತೆಯೇ ಪರಬ್ರಹ್ಮನನ್ನು ಅರಿಯದಂಥ ಗುರುವು ಅಪಕೀರ್ತಿಗೊಳಗಾಗದೆ ಇರಲಾರನು.  
__________________________________

18. ದಾನಭಕ್ತಿಗಳಲ್ಲಿ | 'ನಾನು' ಮರೆದಿರಬೇಕು |
ನಾನೆಂಬ ರೋಗ ನೀಗಿದಗೆ, ಗುರುಭೋದೆ ||
ತಾನೆ ಫಲಿಸುವದು ಸರ್ವಜ್ಞ ||
ಅರ್ಥ: ಭಕ್ತಿ , ದಾನ , ಧರ್ಮಗಳೇ ಮೊದಲಾದವುಗಳಲ್ಲಿ 'ನಾನು' ಎಂಬ ಅಹಂಕಾರವಿರಬಾರದು.(ನಾನು ಭಕ್ತಿವಂತ , ನಾನು ದಾನಿ ಎಂಬ ಗರ್ವವಿರಬಾರದು.)ಮನುಷ್ಯನು ತನ್ನಲ್ಲಿಯ 'ನಾನು'ಎಂಬ ಗರ್ವದ ರೋಗದಿಂದ ಪಾರಾದರೆ ಅವನಿಗೆ ಗುರುಬೋಧೆಯ ಫಲವು ತಾನಾಗಿಯೇ ದೊರೆಯುವುದು.
__________________________________

19. ಶ್ವಾನ ತೆಂಗಿನಕಾಯಿ | ತಾನು ಮೆಲಬಲ್ಲುದೆ |
ಹೀನಮನದವನಿಗುಪದೇಶವಿತ್ತಡದು |
ಹಾನಿ ಕಣಯ್ಯ ಸರ್ವಜ್ಞ ||
ಅರ್ಥ: ನಾಯಿಯು ತೆಂಗಿನಕಾಯಿಯನ್ನು ತಿನ್ನಬಲ್ಲುದೇ? ಎಂದಿಗೂ ಸಾಧ್ಯವಿಲ್ಲ.ಅದರಂತೆ ಹೀನ ಮನದ ಮನುಷ್ಯನಿಗೆ ಉಪದೇಶವಿತ್ತರೆ ಅದರಿಂದ ಹಾನಿಯೇ ಹೊರತು ಉಪಯೋಗವು ಎಳ್ಳಷ್ಟೂ ಇಲ್ಲ.
__________________________________

20. ಕಟ್ಟಿಗೆಗಳೆರಡನ್ನು | ಕಟ್ಟಿಟ್ಟರೇನಹುದು |
ಗಟ್ಟ್ಯಾಗಿ ಎರಡು ಮಥಿಸಲ್ಕೆ , ಬೇಗೆಯದು |
ಬೆಟ್ಟಕೊಂಡಂತೆ ಸರ್ವಗಮಜ್ಞ ||
ಅರ್ಥ: ಎರಡು ಕಟ್ಟಿಗೆಯ ತುಂಡುಗಳನ್ನು ಒಂದೆಡೆ ಸೇರಿಸಿ ಕಟ್ಟಿ ಇಟ್ಟರೆ ಅದರಿಂದ ಏನೂ ಆಗಲಾರದು.ಅವು ಒಂದು ಮೂಲೆಯಲ್ಲಿ ಬಿದ್ದುಕೊಂಡಿರುತ್ತವೆ ಅಷ್ಟೆ.ಆದರೆ ಅವೆರಡೂ ತುಂಡುಗಳನ್ನು ಒಂದಕ್ಕೊಂದು ಚೆನ್ನಾಗಿ ತಿಕ್ಕಿದರೆ ಅಗ್ನಿಯು ಉತ್ಪನ್ನವಾಗಿ ಬೆಟ್ಟವನ್ನೇ ಹಿಡಿದುಕೊಳ್ಳುತ್ತದೆ.
__________________________________


21. ಹಸಿಯ ಸಮಿಧೆಯ ತಂದು | ಹೊಸೆದರುಂಟೇ ಕಿಚ್ಚು |
ವಿಷಯಂಗಳುಳ್ಳ ಮನುಜಂಗೆ , ಗುರುಕರುಣ |
ವಶವರ್ತಿಯಹುದೇ ಸರ್ವಜ್ಞ ||
ಅರ್ಥ: ಹಸಿಯಿದ್ದ ಅರಳಿಯ ಕಟ್ಟಿಗೆಯ ತುಂಡುಗಳನ್ನು ತಂದು ಅವುಗಳನ್ನು ಒಂದಕ್ಕೊಂದು ತಿಕ್ಕಿದರೆ ಬೆಂಕಿ ಉತ್ಪನ್ನವಾಗಬಹುದೇ?ಎಂದಿಗೂ ಆಗಲಾರದು.ಅದರಂತೆ ವಿಷಯ ವಾಸನೆಯುಳ್ಳ ಮನುಷ್ಯನಿಗೆ ಗುರುವಿನ ಕರುಣೆಯು ಎಂದಿಗೂ ಕರಗತವಾಗಲಾರದು.ಅಂದರೆ ಅವನ ಮನಕ್ಕೆ ಹಿಡಿಸಲಾರದು.
__________________________________

22. ಲಿಂಗಕ್ಕೆ ತೋರಿಸುತ | ನುಂಗುವಾತನೆ ಕೇಳು |
ಲಿಂಗವುಂಬುವುದೇ?ಇದನರಿದು,ಕಪಿಯೇ ನೀ |
ಜಂಗಮಗೆ ನೀಡು ಸರ್ವಜ್ಞ ||
ಅರ್ಥ: ಲಿಂಗಕ್ಕೆ ನೈವೇದ್ಯವನ್ನು ತೋರಿಸಿ ನೀನೇ ತಿಂದುಬಿಡುವ ಮಾನವನೇ ಲಿಂಗವೇನಾದರೂ ಉಣ್ಣಬಹುದೇ ? ಅದೆಂದಿಗೂ ಉಣ್ಣಲಾರದು .ಅದಕ್ಕಾಗಿ ನೀನು ಇದನ್ನು ಅರಿತುಕೊಂಡು ಜಂಗಮ ಗಣಕ್ಕೆ ನೀಡುವುದು ಒಳಿತು.
__________________________________

23. ಓದು ವಾದಗಳೇಕೆ | ಗಾದೆಯ ಮಾತೇಕೆ |
ವೇದ ಪುರಾಣ ನಿನಗೇಕೆ , ಲಿಂಗದ |
ಹಾನಿಯರಿದಲೆ ಸರ್ವಜ್ಞ ||
ಅರ್ಥ: ಲಿಂಗುವಿನ ಮರ್ಮವನ್ನರಿದವನಿಗೆ , ಓದು-ಬರಹ, ವಾದ-ವಿವಾದಗಳಲಿ, ವೇದ-ಪುರಾಣ ಪಠಣವಾಗಲಿ ಏತಕ್ಕೆ ಬೇಕು.ಅದನ್ನರಿತುಕೊಂಡಿದ್ದರೂ ನಿರುಪಯೋಗ. 
__________________________________

24. ಇಂಗಿನೊಳು ನಾತವನು | ತೆಂಗಿನೊಳಗಳನೀರು |
ಭೃಂಗ ಕೋಗಿಲೆಯ ಕಂಠದೊಳು , ಗಾಯನವ |
ತುಂಬಿದವರಾರು ಸರ್ವಜ್ಞ || 
ಅರ್ಥ: ಇಂಗಿನೊಳಗೆ ವಾಸನೆಯನ್ನೂ , ತೆಂಗಿನ ಕಾಯಿಯೊಳಗೆ ಎಳನೀರನ್ನೂ ಹಾಗೂ ಭೃಂಗ ಕೋಗಿಲೆಗಳ ಕಂಠದಲ್ಲಿ ಮಧುರ ಗಾಯನ ನಿನಾದವನ್ನೂ ತುಂಬಿದವರು ಯಾರು?(ದೇವರು ಎಂದರ್ಥ).
__________________________________

25. ಕಳ್ಳಿಯೊಳು ಹಾಲು ಮುಳು | ಗಳ್ಳಿಯೊಳು ಹೆಜ್ಜೇನು |
ಎಳ್ಳಿನೊಳಗೆಣ್ಣೆ ಹನಿದಿರಲು , ಶಿವಲೀಲೆ |
ಸುಳ್ಳೆನ್ನಬಹುದೆ ಸರ್ವಜ್ಞ ||  
ಅರ್ಥ: ಕಳ್ಳಿಯೊಳಗೆ ಹಾಲನ್ನೂ , ಮುಳಗಳ್ಳಿಯಂಥ ಕಂಟಿಯೊಳಗೆ ಹಜ್ಜೇನನ್ನೂ , ಎಳ್ಳಿನೊಳಗೆ ಎಣ್ಣೆಯನ್ನೂ ನಿರ್ಮಿಸಿರುವಂಥ ಶಿವನ ಲೀಲೆಯನ್ನು ಸುಳ್ಳೆನ್ನಲು ಸಾಧ್ಯವಿದೆಯೇ ? (ಎಂದಿಗೂ ಇಲ್ಲ)  
__________________________________

26. ನರನು ಬೇಡುವ ದೈವ | ವರವೀಯಬಲ್ಲುದೇ |
ತಿರವರನಡರಿ , ತಿರಿವರೇನಿದನರಿತು |
ಹರನು ಬೇಡುವದು ಸರ್ವಜ್ಞ ||
ಅರ್ಥ: ಮಾನವನನ್ನೇ ಬೇಡುವ ದೈವವು ಅವನಿಗೆ ಮರವನ್ನೀಯಲು ಸಾಧ್ಯವಿದೆಯೇ ? ಅಂಥ ದೈವದಿಂದ ವರವನ್ನು ಬಯಸುವುದೆಂದರೆ ದರಿದ್ರನ ಮನೆಗೆ ಭಿಕ್ಷುಕನು ಹೋದಂತಯೇ ಸರಿ. ಅದಕ್ಕಾಗಿ ಹರನನ್ನು ಬೇಡುವುದು ಒಳಿತು.  
__________________________________

27. ತನ್ನಲಿಹ ಲಿಂಗವು | ಮನ್ನಿಸಲಿಕರಿಯದೆ |
ಬಿನ್ನಣದಿ ಕಟೆದ , ಪ್ರತಿಮೆಗಳಿಗೆರಗುವ |
ಅನ್ಯಾಯ ನೋಡ ಸರ್ವಜ್ಞ ||
ಅರ್ಥ: ತನ್ನಾತ್ಮದಲ್ಲಿರುವಂಥ ಆತ್ಮಲಿಂಗವನ್ನು ಮನ್ನಿಸಲು ತಿಳಿದುಕೊಳ್ಳದಂಥವನ , ಕಟೆದು ಮಾಡಿದ ಪ್ರತಿಮೆಯ ಮುಂದೆ ಬಾಗುವುದು ಅನ್ಯಾಯದ ಅತಿರೇಕವಲ್ಲದೆ ಇನ್ನೇನು?
__________________________________

28. ಉಣಬಂದ ಜಂಗಮಗೆ | ಉಣಬಡಿಸಲೊಲ್ಲದೆ |
ಉಣದಿಪ್ಪ ಲಿಂಗಕುಣಬಡಸಿ , ಕೈ ಮುಗಿದ |
ಬಣಗುಗಳ ನೋಡ ಸರ್ವಜ್ಞ ||
ಅರ್ಥ: ಊಟ ಮಾಡಲು ಬಲ್ಲ-ಬಂದ-ಜಂಗಮನಿಗೆ ಊಟಕ್ಕೆ ನಿಡದೆ ಉಣಲಾರದಂಥ ಲಿಂಗಕ್ಕೆ ನೈವೇದ್ಯವನು ತೋರಿಸಿ ಕೈ ಮುಗಿಯುವಂಥವನಿಗೆ ಏನೆನ್ನಬೇಕು?
__________________________________

29. ಬಟ್ಟೆಯಾ ಕಲ್ಲಿಂಗೆ | ಒಟ್ಟಿ ಪ್ರತಿಯನ್ನಿಟ್ಟು |
ಕಟ್ಟಿದಾ ಲಿಂಗವಡಿಯಾಡಿ , ಶರಣೆಂಬ |
ಭ್ರಷ್ಟರನು ನೋಡ ಸರ್ವಜ್ಞ ||
ಅರ್ಥ: ಮಾರ್ಗದೊಳಗಿನ ಕಲ್ಲಿಗೆ ಪ್ರತಿಮೆಯನ್ನಿಟ್ಟು ತಮ್ಮಲ್ಲಿದ್ದ ಲಿಂಗವನ್ನು ಮರೆತು ಕಂಡಲ್ಲಿ ಕೈ ಮುಗಿಯುವಂಥ ಭ್ರಷ್ಟರನ್ನು ನೀನು ನೋಡಬಲ್ಲೆಯಾ ?
__________________________________

30. ಕಲ್ಲು ಗುಂಡಿನ ಮೇಲೆ | ಮಲ್ಲಿಗೆಯ ಅರಳಿಕ್ಕಿ |
ನಿಲ್ಲದೆ ಹಣೆಯ ಬಡಿವರ್ಗೆ , ಬುಗುಟಿಲ್ಲ |
ದಿಲ್ಲ ಕಾಣಯ್ಯ ಸರ್ವಜ್ಞ || 
ಅರ್ಥ: ಕಲ್ಲು  ಗುಂಡಿನ ಮೇಲೆ ( ಮೂರ್ತಿಯ ಮೇಲೆ ) ಮಲ್ಲಿಗೆಯ ಹೂವುಗಳನ್ನಿರಿಸಿ ಅದಕ್ಕೆ ಹಣೆಯನ್ನು ಬಡಿಯುವವರು ಹಣೆಯ ಬುಗುಟೆ ಏಳದೆ ಇರಲಾರದು. 
__________________________________

31. ಹೆಣ್ಣಿನ ಹೊನ್ನಿನ | ಮಣ್ಣಿನ ಬಲೆಯನ್ನು |
ಹಣ್ಣಿಸಿ ಜಗವನದರೊಳು , ಹಿಡಿದ ಮು |
ಕ್ಕಣ್ಣನ ನೋಡು ಸರ್ವಜ್ಞ ||
ಅರ್ಥ: ಹೆಣ್ಣು - ಹೊನ್ನು ಹಾಗೂ ಮಣ್ಣೆಂಬ ಬಲೆಯನ್ನು ಬಿಸಿ ಸಕಲ ಜಗತ್ತನ್ನೇ ಅದರೊಳಗೆ ಹಿಡಿದುಕೊಂಡಿರುವಂಥ (ಶಿವ) ಮುಕ್ಕಣ್ಣನನ್ನು ನೋಡು.
__________________________________

32. ನರಸಿಂಹನವತಾರ | ಹಿರಿದಾದ ಅದ್ಭುತವು |
ಶರಭನುಗುರಿಂದ ಕೊಲುವಾಗ , ಹರಿ ಊರ |
ನರಿಯಂತಾದ ಸರ್ವಜ್ಞ ||
ಅರ್ಥ: ನರಸಿಂಹನ ಅವತಾರವು ಭಯಂಕರ ಅದ್ಭುತವೆಂದು ಅನ್ನುತ್ತಾರೆ. ಓರ್ವ ರಕ್ಕಸನನ್ನು ಉಗುರುಗಳಿಂದ ಕೊಲ್ಲುವದೆಂದರೆ ಆ ಹರಿಯು ಊರ ಮುಂದಿನ ನರಿಯೇ ಸೈ .
__________________________________

33. ಪಾಲಿಸುವ ಹರಿಯು ತಾ | ಸೋಲನೆಂದೆನಬೇಡ |
ಶೂಲಿ ತಾ ಮಗನ ತಲೆಜಿಗುಟೆ , ಹರಿಯೇಕೆ |
ಪಾಲಿಸದೆ ಹೋದ ಸರ್ವಜ್ಞ || 
ಅರ್ಥ: ಹರಿಯು ಸಂರಕ್ಷಕನು , ಅವನೆಂದಿಗೂ ಹಿಂಜರಿಯಲಾರನು ಎಂದು ಭಾವಿಸಬೇಡ.ಶಿವನು ಅವನ (ಹರಿಯ) ಮಗನ ತಲೆಯನ್ನೇ ಚಿವುಟಿ ಹಾಕಿದಾಗ ಹರಿಯೇಕೆ ಸಲುಹಲಿಲ್ಲ?
__________________________________

34. ಇಂದ್ರನಾನೆಯ | ಒಂದನೂ ಕೊಡಲರಿಯ |
ಚಂದ್ರಶೇಖರನು ಮುದಿಯತ್ತನೇರಿ , ಬೇ |
ಕೆಂದುದನು ಕೊಡುವ ಸರ್ವಜ್ಞ ||
ಅರ್ಥ: ಆನೆಯನೇರಿ ಹೊರಟರು ಇಂದ್ರನು ಏನನ್ನೂ ಕೊಡಲಸಮರ್ಥನು. ಆದರೆ ಮುದಿ ಎತ್ತಿನ ಮೇಲೆ ಕುಳಿತು ಹೊರಡುವ ಚಂದ್ರಶೇಖರ (ಶಿವ)ಬೇಡಿದ್ದನ್ನು ಕೊಡಬಲ್ಲನು.
__________________________________

35. ಸತ್ಯಕ್ಕೆ ಸರಿಯಿಲ್ಲ | ಚಿತ್ತಕ್ಕೆ ಸ್ಥಿರವಿಲ್ಲ |
ಹಸ್ತದಿಂದಧಿಕ ಹಿತರಿಲ್ಲ, ಪರದೈವ |
ನಿತ್ಯನಿಂದಿಲ್ಲ ಸರ್ವಜ್ಞ || 
ಅರ್ಥ: ಸತ್ಯಕ್ಕೆ ಸರಿಯಾದುದು ಚಿತ್ತಕ್ಕೆ ಸ್ಥಿರತೆಯು ಹಾಗೂ ಸ್ವಹಸ್ತಕ್ಕಿಂತ ಹೆಚ್ಚಿನ ಹಿತವಂತರು ಯಾರೂ ಇಲ್ಲ. ಅದರಂತೆ ಪರದೈವಕ್ಕೆ ಶಿವಶರಣರನ್ನುಳಿದು ಯಾರೂ ಇಲ್ಲ.
__________________________________

36. ಭಾಷೆಯಿಂ ಮೇಲಿಲ್ಲ | ದಾಸನಿಂ ಕೀಳಿಲ್ಲ |
ಮೋಸದಿಂಧದಿಕ ಕೇಡಿಲ್ಲ , ಪರದೈವ |
ಈಶನಿಂದಿಲ್ಲ ಸರ್ವಜ್ಞ|| 
ಅರ್ಥ: ಭಾಷೆಗಿಂತ ಹೆಚ್ಚಿನದು ಭೃತ್ಯನಿಗಿಂತ ಕೀಳಾದುದೂ ಹಾಗೂ ಮೋಸತನಕ್ಕಿಂತ ಹೆಚ್ಚಿನ ಕೆಡಕುತನವು ಯಾವುದೂ ಇಲ್ಲ. ಪರದೈವ ಪ್ರಾಪ್ತಿಗೆ ಈಶ್ವರನ ಹೊರತು ಇನ್ನಾದರೂ ಇಲ್ಲ.
__________________________________

37. ಶೇಷನಿಂ ಬಲವಿಲ್ಲ | ಮೋಸಧಿಂ ಕಳವಿಲ್ಲ |
ನೇಸರಿಂ ಜಗಕೆ ಹಿತರಿಲ್ಲ , ಪರದೈವ | 
ಅರ್ಥ: ಆದಿಶೇಷನ ಸಮಾನ ಬಲವುಳ್ಳವರು ಇಲ್ಲ. ಮೋಸದಂಥ ಕಳ್ಳತನವಿಲ್ಲ.ಜಗತ್ತಿಗೆ ಸೂರ್ಯನಿಗಿಂತ ಹೆಚ್ಚಿನ ಹಿತವಂತರಿಲ್ಲ. ಅದರಂತೆ ಪರದೈವ ಪ್ರಾಪ್ತಿಗೆ ಈಶ್ವರನ ಹೊರತು ಇನ್ನಾರೂ ಇಲ್ಲ.
__________________________________

38. ಮಾತೆಯಿಂ ಹಿತರಿಲ್ಲ | ಕೋತಿಯಿಂ ಮರುಳಿಲ್ಲ |
ಜ್ಯೋತಿಯಿಂದಧಿಕ ಬೆಳಕಿಲ್ಲ, ದೈವವ |
ಜಾತನಿಂದಿಲ್ಲ ಸರ್ವಜ್ಞ || 
ಅರ್ಥ: ತಾಯಿಗಿಂತ ಹೆಚ್ಚಿನ ಬಂಧುಗಳಿಲ್ಲ , ಮಂಗನಿಗಿಂತ ಹೆಚ್ಚಿನ ಮೂರ್ಖರಿಲ್ಲ ಹಾಗೂ ಜ್ಯೋತಿಗಿಂತ ಹೆಚ್ಚಿನ ಬೆಳಕು ಇಲ್ಲ.ಅದರಂತೆಯೇ ದೈವಪ್ರಾಪ್ತಿಯು ಪುತ್ರನಿಂದಲೇ ಹೊರತು ಅನ್ಯರಿಂದಲ್ಲ.
__________________________________

39. ಇದ್ದಲಿಂ ಕರಿದಿಲ್ಲ | ಬುದ್ಧಿಯಿಂ ಹಿರಿದಿಲ್ಲ |
ವಿದ್ಯದಿಂದಧಿಕ ಧನವಿಲ್ಲ,ದೈವತಾ |
ರುದ್ರನಿಂದಿಲ್ಲ ಸರ್ವಜ್ಞ || 
ಅರ್ಥ: ಇದ್ದಲಿಗಿಂತ ಕರಿದಾದುದೂ , ಬುದ್ಧಿಗಿಂತ ಹಿರಿದಾದು ಹಾಗೂ ವಿದ್ಯೆಗಿಂತ ಹೆಚ್ಚಿನ ಧನವು ಯಾವುದೂ ಇಲ್ಲ.ಅದರಂತೆ ರುದ್ರನಿಗಿಂತ ಹೆಚ್ಚಿನ ದೈವತ್ವವು ಕೂಡ ಇಲ್ಲ.
__________________________________

40. ಭಕ್ತಿಯಿಂದಲೇ ಮುಕ್ತಿ | ಭಕ್ತಿಯಿಂದಲೇ ಶಕ್ತಿ |
ಭಕ್ತಿ ವಿರಕ್ತಿಯಳಿದರೀ , ಜಗದಲ್ಲಿ |
ಮುಕ್ತಿಯೆಲ್ಲೆಂದ ಸರ್ವಜ್ಞ ||
ಅರ್ಥ: ಭಕ್ತಿಯಿಂದಲೇ ಮುಕ್ತಿ, ಅದರಿಂದ ಶಕ್ತಿಯೂ ಇದೆ. ಭಕ್ತಿ-ವಿರಕ್ತಿಗಳು ಅಳಿದರೆ ಈ ಜಗತ್ತಿನೊಳಗೆ ಮುಕ್ತಿಯೇ ಇಲ್ಲ.ಅದಕ್ಕಾಗಿ ಭಕ್ತಿಯು ಬೇಕೇ ಬೇಕು. 
__________________________________

41. ಕೊಟ್ಟದ್ದು ತನಗೆ | ಬಚ್ಚಿಟ್ಟದ್ದು ಪರರಿಗೆ |
ಕೊಟ್ಟದ್ದು ಕೆಟ್ಟಿತೆನಬೇಡ , ಮುಂದೆ |
ಕಟ್ಟಿಹುದು ಬುತ್ತಿ ಸರ್ವಜ್ಞ ||
ಅರ್ಥ: ಕೈ ಎತ್ತಿ ದಾನ ಕೊಟ್ಟಿದ್ದು ತನಗೆ ಹಾಗೂ ಇರಲಿ ಎಂದು ಮುಚ್ಚಿಟ್ಟದ್ದು ಪರರಿಗೆ ಆಗುವುದು.ದಾನಕೊಟ್ಟು ಕೆಟ್ಟೆ ಎಂದು ನುಡಿಯಬೇಡ. ಅದು ನಿನಗೆ ಮುಂದೆ ಕಟ್ಟಿಟ್ಟ ಬುತ್ತಿಯಂತೆ ಉಪಯೋಗಕ್ಕೆ ಬರುವುದು.
__________________________________

42. ಕೊಟ್ಟು ಕುದಿಯಲು ಬೇಡ | ಕೊಟ್ಟಾಡಿ ಕೊಳಬೇಡ |
ಕೊಟ್ಟು ನಾ ಕೆಟ್ಟೆನೆನಬೇಡ, ಶಿವನಲ್ಲಿ |
ಕಟ್ಟಿಹುದು ಬುತ್ತಿ ಸರ್ವಜ್ಞ || 
ಅರ್ಥ: ಈ ವಚನವು ಸಹ ಸರ್ವಜ್ಞರ 41ನೆಯ ವಚನದ ಅರ್ಥವನ್ನೇ ಸೂಚಿಸುತ್ತದೆ.
__________________________________

43. ಆಗೆ ಬಾ! ಈಗ ಬಾ! ಹೋಗಿ ಬಾ! ಎನ್ನದಲೆ |
ಆಗಲೇ ಕರೆದು ಕೊಡುವವನ, ಧರ್ಮ ಹೊ|
ನ್ನಾಗದೆ ಬಿದ್ದು ಸರ್ವಜ್ಞ ||
ಅರ್ಥ: ದಾನ ಮಾಡುವಂಥವನು ಈಗ ಬಾ , ಇನ್ನು ಸ್ವಲ್ಪ ತಡೆದು ಬಾ , ನಾಳೆಗೆ ಬಾ ,ಎಂದು ನುಡಿಯದೆ , ಕೇಳಲು ಬಂದಾಗ ಕೊಟ್ಟು ಬಿಡುವಂಥವನ ಧರ್ಮವೇ ಒಳ್ಳೆಯದು.ಅದು ಬಂಗಾರದ ಗಟ್ಟಿಯಂತೆ.
__________________________________

44. ತಿರಿದು ತಂದಾದರೂ | ಕರೆದು ಜಂಗಮಕ್ಕಿಕ್ಕು |
ಪರಿಣಾಮವಕ್ಕು ಪದವಕ್ಕು, ಕೈಲಾಸ |
ನೆರೆಮನೆಯಕ್ಕು ಸರ್ವಜ್ಞ || 
ಅರ್ಥ: ತಾನು ತಿರಿದು ತಂದಿದ್ದರೂ ಪರವಾಗಿಲ್ಲ ; ಜಂಗಮರಿಗೆ ಕರೆತಂದು ಉಣಬಡಿಸುವದರಿಂದ ಅವನಿಗೆ ಕೈಲಾಸವೆಂದರೆ ನೆರಮನೆ (ಪಕ್ಕದಮನೆ)ಯಷ್ಟು ಸಮೀಪವಾಗುವುದು.
__________________________________

45. ಬೀಗರುಂಬುವ ದಿನದಿ | ಯೋಗಿ ಭಿಕ್ಷಕೆ ಬರಲು |
ಬೀಗರಿಗೆ ನೀಡಿ , ಯೋಗಿಗಿಲ್ಲೆಂದವಗೆ |
ಕಾಗೆಯ ಜನುಮ ಸರ್ವಜ್ಞ || 
ಅರ್ಥ: ಬೀಗರಿಗೆ ಮೇಜವಾನಿಯನ್ನು ಮಾಡಿಸಿ,ಊಟಕ್ಕೆ ಕುಳ್ಳಿರಿಸಿದ ಸಮಯದಲ್ಲಿ ಯೋಗಿ(ಜೋಗಿ)ಯೊಬ್ಬನು ಭಿಕ್ಷೆಗೆ ಬರಲು ಆಗ ಅವನಿಗೆ ನಿದ್ದೆ ಬೀಗರಿಗೆ ಉಣಿಸುವಂಥವನಿಗೆ ಕಾಗೆಯ ಜನ್ಮವು ತಪ್ಪದು.
__________________________________

46. ಆಡದಲೆ ಕೊಡುವವನು | ರೂಢಿಯೊಳಗುತ್ತಮನು |
ಆದಿ ಕೊಡುವವನು, ಮಧ್ಯಮನಧಮ ತಾ|
ನಾಡಿ ಕೊಡದವನು ಸರ್ವಜ್ಞ || 
ಅರ್ಥ: ನಾನು ದಾನವನ್ನು ಮಾಡು(ಕೊಡು)ತ್ತೇನೆ ಎಂದು ಬಾಯಿಯಿಂದ ಹೇಳದೆ ಸುಮ್ಮನೇ ಕೊಟ್ಟು ಬಿಡುವಂಥವನು ಉತ್ತಮನು. ಕೊಡುತ್ತೇನೆಂದು ಹೇಳಿ ಕೊಡುವವನು ಮಧ್ಯಮನು. ಕೊಡುತ್ತೇನೆಂದು ಹೇಳಿಯೂ ಕೊಡದಂಥವನು ಅಧಮನು (ನೀಚನು)
__________________________________

47. ಆನೆಯನು ಏರುವಡೆ | ದಾನವನು ಮಾಡುವದು |
ಭಾನುಮಂಡಲವನಡರುವಡೆ, ಹಸಿದವರಿಗೆ |
ನೀನೊಲಿದು ಇಕ್ಕು ಸರ್ವಜ್ಞ || 
ಅರ್ಥ: ಆನೆಯನ್ನೇರಿ ತಿರುಗುವವನಿಗೆ ದಾನ ಕೊಡುವದೆಂದರೆ ಸೂರ್ಯಮಂಡಲವನ್ನೇರಿದಂತೆಯೇ ಸರಿ.(ಅದಕ್ಕಾಗಿ) ನೀನು ಹಸಿದವರಿಗೆ ತಪ್ಪದೇ ನೀಡುವಂಥವನಾಗು.
__________________________________

48. ಎತ್ತಣಾ ಹನಿಬಿದ್ದು | ಮುತ್ತಾದ ತೆರನಂತೆ |
ಉತ್ತಮದ ಗತಿಯು ಪಡೆಯುವಡೆ, ಯತಿಗೊಂದು |
ತುತ್ತನಿಕ್ಕೆಂದ ಸರ್ವಜ್ಞ || 
ಅರ್ಥ: ಎಲ್ಲಿಯದೋ ಒಂದು ಮಳೆಯ ಹನಿ ಬಿದ್ದು ಮುತ್ತಾಗುವಂತೆ ಸದ್ಗತಿಯ ಮಾರ್ಗದರ್ಶಕನಾದ ಯತಿಗೂ ಒಂದು ತುತ್ತು ಅನ್ನವನ್ನು ನೀಡಿ ಮೋಕ್ಷ ದೊರಕಿಸಿಬಿಡು.
__________________________________

49. ಅನ್ನವನು ಇಕ್ಕುವ | ಅನ್ಯ ಜಾತನೆ ಕುಲಜ |
ಅನ್ನವನು ಇಕ್ಕದುಣುತಿಪ್ಪ , ಕುಲಜಾತ |
ನನ್ಯನೆಂದರಿಗು ಸರ್ವಜ್ಞ ||
ಅರ್ಥ: ಅನ್ನವನ್ನಿಕ್ಕುವವನು ಅವನು ಯಾವ ಜಾತಿಯವನೇ ಇರಲಿ ಒಳ್ಳೆಯವನೆಂದು ತಿಳಿಯತಕ್ಕದ್ದು.ಅನ್ನವನ್ನೀಯದೇ ತಾನೇ ತಿನ್ನುವಂಥ ಸ್ವಜಾತಿಯವನು ಕೂಡ ಪರನೆಂದೇ ತಿಳಿ.ಅವನು ಸ್ವಜನನಲ್ಲ.
__________________________________

50. ಅನ್ನವನು ಇಕ್ಕಿ ನೀಂ | ಖಿನ್ನವನು ಪಡಬೇಡ |
ಭಿನ್ನ ಭೇದಗಳ ಇಲ್ಲದಲೆ , ಶಿವ ಜಗವ |
ನಿನ್ನು ಸಲಹುವನು ಸರ್ವಜ್ಞ || 
ಅರ್ಥ: ನೀನು ಅನ್ನವನಿಕ್ಕಿ(ಅನ್ನದಾನವ ಮಾಡಿ) ದುಃಖ ಪಡಬೇಡ.ಶಿವ ಯಾವುದೇ ತರಹದ ಭಿನ್ನ-ಭೇದಗಳಿಲ್ಲದೇ ಜಗತ್ತನ್ನು ರಕ್ಷಿಸುತ್ತಿರುವದನ್ನು ನೀನು ಮರೆಯಬೇಡ. 
__________________________________

51. ಉಣ್ಣಡೊಡವೆಯ ಗಳಿಸಿ | ಮಣ್ಣಿನೊಳು ತಾನಿರಿಸಿ |
ಸಣ್ಣಸಿ ನೆಲವಸಾರಿದನ ,ಬಾಯೊಳಗೆ |
ಮಣ್ಣು ಕಾಣಯ್ಯ ಸರ್ವಜ್ಞ || 
ಅರ್ಥ: (ತನ್ನ ಹೊಟ್ಟೆಗೆ ತಿನ್ನದೆ ಒಡವೆಗಳನ್ನು ಸಂಪಾದಿಸಿ ಅವುಗಳನ್ನು ನೆಲದೊಳಗೆ ಹೂತಿಟ್ಟು ಮೇಲೆ ಸೂಸು ಮಣ್ಣಿನಿಂದ ಅಲ್ಲಿಯ ನೆಲವನ್ನು ಸಾರಿಸುತ್ತಿರುವವನ ಬಾಯೊಳಗೆ ಮಣ್ಣು ಬೀಳದೆ ಅರಲಾರದು.
__________________________________

52. ಉಣ್ಣೆ ಕೆಚ್ಚಲೋಳಿರ್ದು | ಉಣ್ಣದದು ನೊರೆವಾಲು |
ಪುಣ್ಯವಮಾಡಿ ಉಣ್ಣಲೊಲ್ಲದ ನಿರವು |
ಉಣ್ಣೆಗೂ ಕಷ್ಟ ಸರ್ವಜ್ಞ || 
ಅರ್ಥ: ಉಣ್ಣೆಯು ಕೆಚ್ಚಲೊಳಗಿದ್ದರೂ ಕೂಡ ಅದು ಹಾಲನ್ನು ಕುಡಿಯುವುದಿಲ್ಲ.(ಅದರಂತೆ)ಪುಣ್ಯವನು ಮಾಡಿ ಉಣಲಾರದಂಥವನ ಬಾಳುವೆಯು ಉಣ್ಣೆಗಿಂತಲೂ ಕಷ್ಟಕರವಾಗುವುದರಲ್ಲಿ ಸಂದೇಹವಿಲ್ಲ.
__________________________________

53. ಭಿಕ್ಷೆವೆಂದವರಿಗೆ | ಭಿಕ್ಷೆಯನು ನೀಡಿದರೆ |
ಅಕ್ಷಯ ಪದವು ದನಗಕ್ಕು, ಇಲ್ಲವೆನೆ |
ಭಿಕ್ಷುಕನಕ್ಕು ಸರ್ವಜ್ಞ || 
ಅರ್ಥ: ದೇಹಿ ಎಂದು ಬಂದವರಿಗೆ ಭಿಕ್ಷೆಯನ್ನು ನೀಡುವವನು ಅಕ್ಷಯ ಪದವನ್ನು ಪಡೆಯುವನು. ಆದರೆ ನೀಡಲಾರದಂಥವನು ಮಾತ್ರ(ಒಂದು ದಿನ) ಭಿಕ್ಷುಕನಾಗುವನು.
__________________________________

54. ಕಾಗೆಯಗುಳನು ಕಂಡು | ಕೂಗುವದು ಬಳಗವನು |
ಕಾಗೆ ಕೋಳಿಗಳ , ತೆರೆದುಣ್ಣದವನಿರವು |
ಕಾಗೆಗೂ ಕಷ್ಟ ಸರ್ವಜ್ಞ || 
ಅರ್ಥ: ಒಂದು ಅಗಳು ಅನ್ನವನ್ನು ಕಂಡರೂ ಕೂಡ ಕಾಗೆ ಕಾ-ಕಾ ಎಂದು ತನ್ನ ಬಳಗವನ್ನೇ ಕರೆದು ಅವುಗಳೊಂದಿಗೆ ಕೂಡಿಕೊಂಡು ತಿನ್ನುವುದು.(ಅದರಂತೆ) ಕಾಗೆ ಹಾಗೂ ಕೋಳಿಗಳಂತೆ ತನ್ನವರನ್ನು ಕರೆದುಕೊಂಡು ತಿನ್ನಲಾರದಂಥವನ ಬಾಳುವೆಯು ಕಾಗೆಗಿಂತಲೂ ಕಷ್ಟಕರ (ಹೀನ) ವಾಗುವುದು.
__________________________________

55. ಮಾನವರ ದುರ್ಗುಣವ | ನೇನೆಂದು ಬಣ್ಣಿಪೆನು |
ದಾನಗೈಯೆನಲು ಕನಲುವರು, ದಂಡವನು |
ಮೌನದೀಯುವರು ಸರ್ವಜ್ಞ || 
ಅರ್ಥ: ಮಾನವರ ದುರ್ಗುಣವನ್ನು ಏನೆಂದು ಹೇಳಲಿ ? ದಾನ ಮಾಡು ಎಂದರೆ ಸಿಟ್ಟಿಗೇಳುವರು. ದಂಡವನ್ನು (ಆದರೆ) ಮಾತ್ರ ಮೌನದಿಂದಲೇ ಕೊಡುವರು.
__________________________________

56. ಎರೆಯಲೊಲ್ಲದ ಲೋಭಿ | ಕರೆಯಲೊಲ್ಲದ ಗೋವು |
ಬರಿಗಾಲ ಪಯಣ ಇವು ಮೂರು, ತನ್ನ ತಾ |
ನಿರಿದುಕೊಂಡಂತೆ ಸರ್ವಜ್ಞ || 
ಅರ್ಥ: ಅನ್ಯರಿಗೆ ಕೊಡಲಾರದ ಜಿಪುಣ , ಹಾಲನ್ನೀಯಲಾರದಂತಹ ಹಸು , ಬರಿಗಾಲಿನಿಂದ (ಪಾದರಕ್ಷೆಗಳಿಲ್ಲದೆ) ಮಾಡುವ ಪ್ರಯಾಣ ಇವು ಮೂರು ತನ್ನನ್ನು ತಾನೇ ಇರಿಬುಕೊಂಡಂತೆ (ಇದರಲ್ಲಿ ಸಂಶಯವೇ ಇಲ್ಲ).
__________________________________

57. ಕಂಡವರ ದಂಡಿಸುತ | ಕೊಂಡವರ ಒಡವೆಗಳ |
ನುಂಡುಂಡುಮಲಗಿ , ಮಡಿದ ಮೇಲವಗೆ ಯಮ |
ಗೊಂಡ ತಪ್ಪುವುದೇ ಸರ್ವಜ್ಞ || 
ಅರ್ಥ: ಕಂಡವರನ್ನು ದಂಡಿಸುತ್ತ ಅನ್ಯರ ಒಡವೆಗಳನ್ನು ಅಪಹರಿಸಿ, ಅದನ್ನು ತಿಂದು ಕಾಲಕಳೆದು ಸತ್ತುಹೋದಂಥವನಿಗೆ ಯಮಗೊಂಡವು (ನರಕ) ಎಂದಿಗೂ ತಪ್ಪಲಾರದು.
__________________________________

58. ಉಳ್ಳಲ್ಲಿ ಉಣಲಿಲ್ಲ | ಉಳ್ಳಲ್ಲಿ ಉಡಲಿಲ್ಲ |
ಉಳ್ಳಲ್ಲಿ ದಾನ, ಕೊಡಲೊಲ್ಲದವನೊಡನೆ |
ಕಳ್ಳಗೆ ನೃಪಗೆ ಸರ್ವಜ್ಞ || 
ಅರ್ಥ: (ತನ್ನ ಬಳಿ) ಇದ್ದಾಗ ಸರಿಯಾಗಿ ಮಾಡದಂಥವನು, ಒಳ್ಳೆಯ ಬಟ್ಟೆಗಳನ್ನು ತೊಡಲಾರದಂಥವನು ಹಾಗೂ (ಸತ್ಪಾತ್ರರಲ್ಲಿ) ದಾನವನ್ನು ಮಾಡಲಾರದಂಥವನ ಐಶ್ವರ್ಯವು ಕಳ್ಳರು ಹಾಗೂ ಸರಕಾರದ ಪಾಲಾಗುವುದರಲ್ಲಿ ಸಂಶಯವಿಲ್ಲ. 
__________________________________

59. ಕೊಟ್ಟುಂಬಕಾಲದಲ್ಲಿ | ಕೊಟ್ಟುಣಲು ಕಲಿಯದೆ |
ಹುಟ್ಟಿಯ ಒಳಗೆ ಜೇನಿಕ್ಕಿ, ಪರರಿಗೆ |
ಬಿಟ್ಟು ಹೋದಂತೆ ಸರ್ವಜ್ಞ || 
ಅರ್ಥ: ಈ ವಚನದ ಅರ್ಥವು 50ನೆಯ ವಚನದ ಅರ್ಥದಂತೆಯೇ ಇದೆ.ಅಂದರೆ(ತನ್ನ ಬಳಿ) ಇದ್ದಾಗ ಇತರರಿಗೂ (ಇತ್ತು) ಕೊಟ್ಟು ತಾನೂ ಉಣದಂಥವನ ಬಾಳುವೆಯು ,ಜೇನ್ನೊಣವು ತಾನು ತಿನ್ನದೇ ಹುಟ್ಟಿನೊಳಗೆ ತುಪ್ಪವನ್ನು ಕೂಡಿ ಇಟ್ಟು ಪರರ ಪಾಲಿಗೆ ಮಾಡಿದಂತೆಯೇ ಸರಿ.
__________________________________

60. ಒಡಲಿಡಿದು ಗಳಿಸಿದಾ | ಒಡವೆಗಳು ಒಡನಿರಲು |
ಕೊಡದುಣ್ಣದಿಟ್ಟು ಮಾಡಿದರೆ, ಒಡವೆಯ |
ನೊಡನೆ ಹೂಳುವರೆ? ಸರ್ವಜ್ಞ || 
ಅರ್ಥ: (ತನ್ನ) ಹೊಟ್ಟೆಯನ್ನು ಕಟ್ಟಿ (ಬಂಗಾರದ) ಒಡವೆಗಳನ್ನು ಸಂಗ್ರಹಿಸಿಟ್ಟಿಕೊಂಡು (ಯಾರಿಗೂ ದಾನ ಧರ್ಮ ಮಾಡದೆ) ಒಂದು ದಿನ ಸತ್ಯುಹೋದರೆ ಅವನೊಂದಿಗೆ ಆ ಒಡವೆಗಳನ್ನು ಹೂಳುವರೇ? ಎಂದಿಗೂ ಇಲ್ಲ. 


ಮುಂದುವರೆಯುವುದು..



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...