Wednesday, November 1, 2017

ಪಡುವಣ ಕಡಲಿನ..

ಪಡುವಣ ಕಡಲಿನ ನೀಲಿಯ ಬಣ್ಣ, 
ಮುಡಿಯೊಳು ಸಂಜೆಯ ಅಂಚಿನ ಚಿನ್ನ, 
ಹೊಳೆಗಳ ಸೆರೆಗಿನ ಪಚ್ಚೆಯ ಬಯಲು, 
ಬಿರುಮಳೆಗಂಜದ ಬೆಟ್ಟದ ಸಾಲು, 
ಹುಲಿ ಕಾಡನೆಗಳಲೆಯುವ ಕಾಡಿದು,
ಸಿರಿಗನ್ನಡ ನಾಡು! 

ಕಲ್ಲಿಗೆ ಬಯಸಿದ ರೂಪವ ತೊಡಿಸಿ, 
ಮುಗಿಲಿಗೆ ತಾಗುವ ಮೂರ್ತಿಯ ನಿಲಿಸಿ, 
ದಾನ ಧರ್ಮಗಳ ಕೊಡುಗೈಯಾಗಿ, 
ವೀರಾಗ್ರಣಿಗಳ ತೊಟ್ಟಿಲ ತೂಗಿ, 
ಬೆಳಗಿದ ನಾಡಿದು, ಚಂದನಗಂಪಿನ
ಸಿರಿಗನ್ನಡ ನಾಡು! 

ಇಲ್ಲಿ ಅರಳದಿಹ ಹೂವುಗಳಿಲ್ಲ :
ಹಾಡಲು ಬಾರದ ಹಕ್ಕಿಗಳಿಲ್ಲ -
ಸಾವಿರ ದೀಪಗಳರಮನೆಯೊಳಗೆ 
ಶರಣೆನ್ನುವೆನೀ ವೀಣಾಧ್ವನಿಗೆ. 
ಕನ್ನಡ ನಾಡಿದು ; ಮಿಂಚುವ ಕಂಗಳ 
ಸಿರಿಗನ್ನಡ ನಾಡು. 

                                              - ಕೆ. ಎಸ್. ನರಸಿಂಹಸ್ವಾಮಿ



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...