Friday, May 11, 2018

ಲಂಚದ ಸುಳಿಗೆ ನೀ ಸಿಲುಕದಿರು ಓ ಮತದಾರ..


ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಪ್ರಮೀಳಾಮಂಜು ಉರಾಳ' ಅವರ ಸಾಲುಗಳು..

ಇತ್ತೀಚೆಗೆ ಬಹಳವಾಗಿ ಎಲ್ಲೆಂದರಲ್ಲಿ ಹತ್ತು ಹಲವಾರು ಅವತಾರಗಳಲಿ ತನ್ನ ಕಬಂಧ ಬಾಹುಗಳನ್ನು ಬಡವರತ್ತ ಚಾಚಿ ಆಸೆಗಳ ಆಮಿಷದ ಬಲೆಯನ್ನೊಡ್ಡಿ ಸಂಪೂರ್ಣವಾಗಿ ಅವರನ್ನು ಸೆರೆಮಾಡಿಕೊಂಡಿರುವುದು ಈ "ಲಂಚ" ಎಂಬ ರಾಕ್ಷಸ.

ಹಿಂದೆಲ್ಲಾ ಪ್ರಾಮಾಣಿಕತೆಯೇ ದೇವರು ಎಂದು ನಂಬಿದ್ದ ಕಾಲವೊಂದಿತ್ತು... ಆಸೆ ಆಮಿಷಗಳಿರಲಿಲ್ಲವೇನೋ‌.. ನ್ಯಾಯ ದೇವತೆ ಪ್ರತಿಯೊಬ್ಬರ ಮನೆ ಮನದಲ್ಲೂ ನೆಲೆಸಿದ್ದಿರಬೇಕು.... ದುಡಿದು ಬಂದ ಹಣದಲ್ಲೇ ನೆಮ್ಮದಿ ಸುಖ ಶಾಂತಿ ಕಾಣುತಿದ್ದರು.

ಅನುಕಂಪ, ಬಡತನ, ಆದರಾಭಿಮಾನ, ಗೌರವಗಳಿಗೆ ಪ್ರಾಶಸ್ಯ ನೀಡಿ ಅಗತ್ಯವಾದ ಸೇವೆ ಸೌಕರ್ಯಗಳು ಒದಗಿಬರುತ್ತಿತ್ತು.. ಕೈ ಚಾಚುವ ಬದಲು ಸಂತೋಷದಿಂದ ಕೈ ಮುಗಿವ ಸಂತೃಪ್ತ ಜೀವನವಿತ್ತು.

ಆದರೀಗಂತೂ ಎಲ್ಲಾ ಕೆಲಸದಲ್ಲೂ ನೀ ಕೊಟ್ಟರಷ್ಟೆ ಕೆಲಸ ಎಂಬಂತಾಗಿದೆ. ಒಂದು ಸಣ್ಣ ನೌಕರಿಗೆ, ಪರೀಕ್ಷೆಯ ಅಂಕಗಳಿಗೆ, ಪ್ರಶ್ನೆ ಪತ್ರಿಕೆಗೆ, ಪದಾರ್ಥಗಳ ಕಲಬೆರಕೆಗೆ, ಶಿಶುಗಳ ಮಾರಾಟಕ್ಕೆ, ಅಕ್ರಮ ಆಸ್ತಿಗಳಿಗೆ ಮಾತ್ರವಲ್ಲದೆ ದೊಡ್ಡ ದೊಡ್ಡ ಹಗರಣಗಳು ಬೆಳಕಿಗೆ ಬಾರದಂತೆ ಮುಚ್ಚಿ‌ಹಾಕಲು "ಲಂಚ"ದ ಮಾರ್ಗ ಸುಲಭವಾಗಿದೆ. ಹೀಗೆ ಪ್ರತಿಯೊಂದು ಭಾಗದಲ್ಲೂ ಈ ಲಂಚದ ನಾನಾವತಾರಗಳು ತಲೆ ಎತ್ತಿವೆ.

ಈ ಸಮಾಜದಲ್ಲಿ ಹಣ ಪಡೆಯದೇ ಕೆಲಸವೇ ಆಗದು ಎಂದು ತಾವಾಗೇ ಮುಂದೆ ಬಂದು ಅಧಿಕಾರಿಗಳ ಕೈ ಬೆಚ್ಚಗೆ ಮಾಡುವಷ್ಟು ಹದಗೆಟ್ಟಿದೆ. ಎಷ್ಟೇ ಹಣ ಖರ್ಚಾದರೂ ಸರಿ, ನಮಗಂತೂ ಕೆಲಸ ದಕ್ಕಿತಲ್ಲ ಎಂದು ಬೀಗುವಂತಾಗಿದೆ.. ನ್ಯಾಯದೇವತೆ ಕಣ್ಮುಚ್ಚಿ ಕುಳಿತಿಹಳು ಎಂಬ ಧೈರ್ಯದಲ್ಲಿ ನ್ಯಾಯಕ್ಕೂ ಅನ್ಯಾಯವಾಗುತಿದೆ.

ಇಷ್ಟಕ್ಕೇ ಮುಗಿಯದ ಈ ರಕ್ಕಸನ ಹೊಟ್ಟೆಬಾಕತನ ಪ್ರಜಾಪ್ರಭುತ್ವ ದಲ್ಲಿ ಅತ್ಯಂತ ಪವಿತ್ರವಾದ ಮತದಾನದ ಹಕ್ಕನ್ನು ನಾನಾ ಬಗೆಯ ಆಮಿಷಗಳನ್ನು ಒಡ್ಡಿ ಹಕ್ಕುದಾರನ ಹಕ್ಕನ್ನು ಕಸಿದುಕೊಂಡು ನುಂಗಿ ಹಾಕಿದೆ. ಒಂದು ಹೊತ್ತು ಊಟಕ್ಕೂ ಗತಿ ಇಲ್ಲದ ಬಡವರಿಗೆ ಅಂದಿನ ದಿನದ ಊಟದ ಆಸೆ ತೋರಿಸಿ, ಅವರ ಭವಿಷ್ಯವನ್ನು ಇನ್ನಷ್ಟು ನರಕಮಾಡಿ ಮನ ಓಲೈಸಿ ತನ್ನಡೆಗೆ ಸೆಳೆಯಲು ಪಕ್ಷಗಳು ಹೋರಾಟಕ್ಕೆ ಇಳಿದಿವೆ.

ಪ್ರಾಮಾಣಿಕವಾಗಿ ದುಡಿದು ತಿನ್ನಲು ಅವಕಾಶ ಮಾಡಿಕೊಡದೆ, ಕೈಗೊಂದಿಷ್ಟು ನೋಟುಗಳನ್ನು ತುರುಕಿ ಅಂದಿನ‌ಮಟ್ಟಿಗೆ ಸಾಧನೆ ಮಾಡಿದಂತೆ ಮಾಡಿ ಜನರ ದುಡಿಮೆಯ ಕನಸನ್ನು ನಾಶ ಮಾಡಿದ್ದೇ ಈ ಲಂಚಕೋರತನದ ಹೇಯ ಕೃತ್ಯವಾಗಿದೆ.

ಯಾವುದೇ ಆಸೆಗಳಿಗೆ ಮಣಿಯದೇ ಮತ ಹಾಕಲು ಹಕ್ಕನ್ನು ಪಡೆದ ಪ್ರಜೆ ನಾಡಿನ ಕ್ಷೇಮಕ್ಕಾಗಿ, ದೇಶದ ಬೆನ್ನೆಲುಬಾದ ರೈತರ ಒಳಿತಿಗಾಗಿ, ಯಾವುದೇ ತೊಂದರೆಗಳಾದರೂ ಪಕ್ಷ ಬದಲಾಯಿಸದೇ ಪ್ರಾಮಾಣಿಕವಾಗಿ ದುಡಿಯುವ ಕೆಚ್ಚೆದೆಯ ನಾಯಕನಿಗೆ ಹತ್ತು ಹಲವಾರು ಬಾರಿ ಯೋಚಿಸಿ ಮತ ಚಲಾಯಿಸಬೇಕು.

ಮತ ಹಾಕಿದರಷ್ಟೇ ನಮ್ಮ ಕರ್ತವ್ಯ ಮುಗಿದು ಹೋದಂತಲ್ಲ.. ನಾವೂ ಸಹ ನಾಡಿನ ಮುಂದಿನ‌ ಭವಿಷ್ಯ ಕ್ಕಾಗಿ ಪ್ರಾಮಾಣಿಕರಾಗಿ ದುಡಿಯಬೇಕು.. ಪ್ರಕೃತಿಯ ಸಂಪನ್ಮೂಲಗಳನ್ನು ಮಿತವಾಗಿ ಬಳಸುತ್ತಾ... ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಕ್ಷಣಕ್ಕೆ ಸಿಗುವ ಅನುಕೂಲಗಳಿಗೆ, ಆಸೆಗಳಿಗೆ ಬಲಿಯಾಗಬಾರದು‌.. ಹಕ್ಕುಗಳ ಬಗ್ಗೆ ಅರಿವು ಮೂಡಬೇಕು‌. ಹೀಗೆಲ್ಲಾ ಆಗಬೇಕೆಂದರೆ, ಮೊದಲು ಈ "ಲಂಚ" ಎಂಬ ಪೀಡೆಯನ್ನು ಮನಮನೆಗಳಿಂದ ತೊಲಗಿಸಬೇಕು.

"ಲಂಚ ಕೊಡುವುದೂ ತೆಗೆದುಕೊಳ್ಳುವುದು ಅಪರಾಧ" ಎಂಬ ಕಾನೂನಿನ ಸತ್ಯವನ್ನು ಎಲ್ಲರಿಗೂ ಮನದಟ್ಟು ಮಾಡಬೇಕು.. ಕರ್ನಾಟಕ ರಾಜ್ಯದ ಪ್ರಜ್ಞಾವಂತ ಮತದಾರರೇ "ಲಂಚವಿಲ್ಲದ ನ್ಯಾಯಯುತ ಮತ ನಮ್ಮದಾಗಲಿ. ಪ್ರಾಮಾಣಿಕರಾಗಿ ಮತ ಚಲಾಯಿಸಿ"

ನಾಡು ದೇಶದ ಒಳಿತಿಗಾಗಿ ಮನಃಪೂರ್ವಕವಾಗಿ ಮತ್ತು ಪ್ರಾಮಾಣಿಕವಾಗಿ ಒಗ್ಗೂಡೋಣ...

- ಪ್ರಮೀಳಾಮಂಜು ಉರಾಳ.. 

Like this post? Like & Follow us on Facebook so you never miss out.



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...