Friday, May 11, 2018

ಕಣ್ಣಿಗೆ ಕಾಣದ ಶ್ರಮದ ಜಗತ್ತು..


ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಸೌಮ್ಯ ಮಂಡ್ಯ' ಅವರ ಸಾಲುಗಳು..

ದಾರೀಲಿ ಹೋಗ್ತಾ ರಸ್ತೆ ಬದಿಯಲ್ಲಿ ಕಣ್ಣಾಯಿಸಿದ್ರೆ ಕೆಲವು ಕಡೆ ಕರಕುಶಲ ವಸ್ತುಗಳನ್ನ ಇಟ್ಕೊಂಡು ಮಾರ್ತಾ ಇರ್ತಾರೆ. ನಾವು ಅದ್ನ ನೋಡಿ ಚೆನ್ನಾಗಿರೋದ್ನ ಅಥವಾ ನಮ್ಮ ಮನಸ್ಸಿಗೆ ಇಷ್ಟ ಆಗಿದ್ನ ಬೆಲೆ ಎಷ್ಟು ಅಂತ ಕೇಳ್ತಿವಿ. ಬೆಲೆ ಜಾಸ್ತಿ ಇದೆ ಅಂದ್ರೆ ಅಲ್ಲಿಂದ ಜಾಗ ಖಾಲಿ ಮಾಡ್ತೀವಿ, ಅಥವಾ ಚೌಕಾಸಿ ಮಾಡ್ತೀವಿ. 10-20 ರೂಪಾಯಿಗೋಸ್ಕರ ಹೋರಾಡೋ ನಮ್ಗೆ ಆ ವಸ್ತು ತಯಾರಾಗೋದಕ್ಕೆ ಅದೆಷ್ಟು ಕಣ್ಣೀರಿನ ಕಥೆಗಳು, ನೋವಿನ ವ್ಯಥೆಗಳು ಹಾಸಿಗೆ ಹೊದ್ದು ಮಲಗಿವೆಯೋ ಗೊತ್ತಿರೋದಿಲ್ಲ.

ಗೊತ್ತಾಗೋದಾದ್ರು ಹೇಗೆ..? ಆಲೋಚಿಸುವ ಮನಸ್ಸಿದ್ದರೆ ಇಂತಹ ವಿಚಾರಗಳಿಗೆ ಯೋಚಿಸೋ ಅವಕಾಶ ಇರುತ್ತೆ. ಮನಸ್ಸಲ್ಲಿ ಸಾವಿರ ನೋವು ತುಂಬಿಕೊಂಡು, ತಮ್ಮ ಶ್ರಮವನ್ನೆಲ್ಲಾ ಧಾರೆಯೆರೆದು, ನಿರ್ಜೀವವಾಗಿದ್ದರೂ ಸದಾ ಮುಗುಳು ನಗುವಂತೆ ಬೊಂಬೆಗಳಿಗೆ ನಗುವ ತುಂಬುವ ಕರಕುಶಲಿಗರ ಕಥೆ ಇದು. ಎಲ್ಲಾ ವಿಚಾರಗಳಲ್ಲೂ, ವಸ್ತುಗಳಲ್ಲೂ ಅವು ತಮ್ಮದೇ ಆದ ಇತಿಹಾಸದ ಕಥೆಗಳನ್ನು ತಮ್ಮ ಜೊತೆಗೆ ಇಟ್ಟುಕೊಂಡೇ ಸಾಗುತ್ತವೆ. ಆದರೆ ಕೇಳುವವರಾರು ಇರುವುದಿಲ್ಲ ಅಷ್ಟೇ.

ಇನ್ನೂ ಆಲೋಚಿಸುತ್ತಾ ಹೋದಂತೆಲ್ಲಾ ವಿಷಯಗಳ ಬಾಗಿಲು ತೆರೆಯುತ್ತಾ ಹೋಗುತ್ತದೆ. ನಾವು ದಿನನಿತ್ಯ ಸೇವಿಸೋ ಅನ್ನವು ಅಕ್ಕಿಯಾಗಲು, ಆ ರೈತ ಅದೆಷ್ಟು ಪರಿಪಾಟಲು ಪಡಬೇಕೆಂಬುದು ರೈತನಿಗೆ ಗೊತ್ತು. ಸರಿಯಾದ ಬೆಲೆ, ಬೆಳೆದ ಬೆಳೆಗೆ ಸಿಗದೆ ಒದ್ದಾಡುವಾಗ ರೈತನ ಕಣ್ಣೀರಿಗೆ ಬೆಲೆ ಇಲ್ಲ. ರೈತನ ಶ್ರಮಕ್ಕೆ ಕಣ್ಣೀರೆ ಪ್ರತಿಫಲ. ಜಗದ ಹಸಿವು ನೀಗಿಸೋ ದೇವರಿಗೆ ನೋವಿನ ಅಭಿಷೇಕ.

ಅಲ್ಲಲ್ಲಿ ಕಣ್ಣಿಗೆ ಬೀಳೋ ಲೆಕ್ಕವಿಲ್ಲದಷ್ಟು ಎತ್ತರ, ಸುಂದರವಾದ ಕಟ್ಟಡಗಳ ಪರಿಮಳಕೆ, ಚೆಂದದ, ಅಚ್ಚುಕಟ್ಟಾದ ನೈಪುಣ್ಯತೆ ತುಂಬಿದ ಕೈಗಳು, ಆ ಕೈಗಳ ಮುಗ್ಧ ಶ್ರಮ ಕಣ್ಣಿಗೆ ಕಾಣುವುದೇ ಇಲ್ಲ. ಆ ನೋವುಗಳನ್ನು ಯೋಚಿಸೋ ಮನಸ್ಥಿತಿ ನಮಗೆಲ್ಲಿಂದ ಬರಬೇಕು.

ಯಾವುದೇ ಚಿತ್ರ ತೆರೆಯ ಮೇಲೆ ಬರಲು, ಬಂದು ನಮ್ಮನ್ನೆಲ್ಲಾ ರಂಜಿಸಲು ನೂರಾರು ಮಂದಿ ಅದೆಷ್ಟೋ ರಾತ್ರಿ ಹಗಲು, ಹಸಿವು, ನಿದಿರೆಯನ್ನ ತ್ಯಾಗ ಮಾಡಿ ಅಥವಾ ಬಲಿ ಕೊಟ್ಟು ಶ್ರಮಿಸುತ್ತಾರೋ ಆ ಜೀವಗಳಿಗೆ ಗೊತ್ತು ಪರಿಶ್ರಮದ ನೋವು, ನಲಿವು. ಆದರೆ ಇದಾವುದು ಯಾರ ಕಣ್ಣಿಗೂ ಬೀಳದೆ ಅಲ್ಲಲ್ಲಿ ಮೈಮರೆಸಿಕೊಂಡಿರುತ್ತೆ. ಸದಾ ಇಂತಹ ನೋವುಗಳು ಎಷ್ಟಿಲ್ಲ ನಮ್ಮ ನಿಮ್ಮ ಸುತ್ತಮುತ್ತಲು. ಆದರೆ ಅವುಗಳನ್ನು ನೋಡುವ ಮನಸ್ಸಿನ ಕಣ್ಣು ನಮಗಿಲ್ಲ‌ ಅಷ್ಟೇ. ತಮ್ಮ ಸಂತಸವ ಬದಿಗಿರಿಸಿ, ನೋವುಗಳನ್ನೇ ನುಂಗುತ್ತಾ ದುಡಿಯುವ ಬಡಜೀವಗಳಿಗೆ ಹೃದಯ ಶ್ರೀಮಂತರಾಗಿ, ಅವರನ್ನು ಗೌರವಿಸಿದರೆ, ಅಭಿನಂದಿಸಿದರೆ ಅವರ ಸಂತೋಷ ಮುಗಿಲು ಮುಟ್ಟಿರುತ್ತದೆ.

ಸದಾ ಕಾಲ ನಮ್ಮ ಕುರಿತಾಗೆ ಸಾವಿರ ಯೋಜನೆಗಳನ್ನು ಹರವಿಕೊಂಡು ಜೀವನ ನಡೆಸೋ ನಮಗೆ ಬೇರೆಯವರ ನೋವಿಗೆ ಜಾಗವೆಲ್ಲಿದೆ? ನಮ್ಮ ನೋವುಗಳ ಬದಿಗಿರಿಸಿ ನೋಡಿದರೆ ಪ್ರಪಂಚವೇ ನೋವಿನಿಂದ ಅಳುವಂತೆ ಕಾಣುತ್ತೆ. ನಮ್ಮ ನೋವ ಮರೆತು ಬೇರೆಯವರ ನೋವಿಗೂ ಸ್ಪಂದಿಸೋ ವಿಶಾಲ ಹೃದಯವಿದ್ದರೇ ಎಷ್ಟೋ ತೃಪ್ತಿ ತರುತ್ತದೆ. ಅದೇನೆ ಇರಲಿ ಕತ್ತಲ ಮರೆಯಲ್ಲಿ‌ ನೋವುಂಡು ಬದುಕುವ ಎಲ್ಲಾ ಕ್ಷೇತ್ರದ ಎಲ್ಲಾ ವೃತ್ತಿಪರ ಶ್ರಮ ಜೀವಿಗಳ ಮುಗ್ಧತೆಯ ಶ್ರಮಕ್ಕೆ ನನ್ನ ಹೃದಯ ತುಂಬಿದ ಅನಂತ ನಮನಗಳು...

- ಸೌಮ್ಯ ಮಂಡ್ಯ.. 

Like this post? Like & Follow us on Facebook so you never miss out.


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...