ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಸೌಮ್ಯ ಮಂಡ್ಯ' ಅವರ ಕವನ..
ಈ ಬಾಳಿನ ದಾರಿಯಲಿ
ಆಸೆಗಳ ಮೈಲುಗಲ್ಲು ದಾಟಿ
ಕನಸುಗಳ ಗೋಪುರ ಹತ್ತಿ
ಸಾಧಿಸಿದ್ದೇನೋ ತಿಳಿದಿಲ್ಲ
ಜೀವನವ ಭೇದಿಸಿದಾಗ
ಜೊತೆಯಾಗಿದ್ದು
ಅಂತಿಮ ಯಾತ್ರೆ...
ನಗು ಅಳುವಿನ ಜಂಜಾಟ ತೊರೆದು
ಕತ್ತಲು ಬೆಳಕಿನ ವ್ಯತ್ಯಾಸ ಮರೆತು
ನೋವು ನಲಿವಿನ ಭಕ್ಷ್ಯವ ತಿಂದು ತೇಗಿ, ಅರಗಿಸಿ,
ಬಾಳಿಗೆ ಅನಾರೋಗ್ಯದ ಗಾಳಿ
ಬೀಸಿ ಪೀಡಿಸಿ, ಕಾಡಿಸಿ ಈ
ಪಯಣವೇ ಸಾಕೆನ್ನೋ
ನಿಶ್ಚಿಂತೆ ಈ ಯಾತ್ರೆ...
ಮೋಸಕ್ಕೆ ಆತ್ಮೀಯನಾಗಿ
ಮನಸಿಗೆ ದಾಸನಾಗಿ
ನ್ಯಾಯವೇ ಅಳುತ್ತಿದ್ದರೂ
ಮಾನವೀಯತೆ ಮಣ್ಣಾದರೂ
ಸಮಾಧಾನಿಸುವ ಗುಣವನ್ನೇ
ಕಿತ್ತು ಸ್ವಾರ್ಥದ ಬೆಂಕಿಯಲ್ಲಿ
ಸುಟ್ಟು ಹಾಕಿ ಬದುಕಿನ ರಾಜ್ಯ
ಬಿದ್ದು ಹೋದ ಘಳಿಗೆ
ಕೊನೆಯ ಯಾತ್ರೆ...
ಹಣೆಬರಹದ ಹಣೆಪಟ್ಟಿ ಅಳಿಸಿ
ಹುಟ್ಟಿಗೊಂದು ಕೊನೆಪಟ್ಟಿ ಬರೆಸಿ
ಯಾರನು ಕೇಳದೆ
ಯಾರಿಗೂ ಹೇಳದೆ
ಈ ಲೋಕವ ಈ ದೇಹವ
ತ್ಯಜಿಸಿ ಹೊರಡುವ ಈ
ಒಂಟಿ ಯಾತ್ರೆ ಘೋರ
ನಿಶ್ಯಬ್ದ...
ಬದುಕೊಂದು ಶಬ್ದ
ಸಾವೆಂದು ನಿಶ್ಯಬ್ದ....
No comments:
Post a Comment