Friday, May 11, 2018

ಮತದಾನ: ಪ್ರಜಾಸತ್ತಾತ್ಮಕ ವ್ಯವಸ್ಥೆಯ ಸರ್ವೋತ್ಕೃಷ್ಟ ಕರ್ತವ್ಯ..


ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಅಳಗುಂಡಿ ಅಂದಾನಯ್ಯ' ನವರ ಸಾಲುಗಳು.. 

ಪ್ರಜಾಪ್ರಭುತ್ವ ಅಥವಾ ಪ್ರಜಾಸತ್ತಾತ್ಮಕ ವ್ಯವಸ್ಥೆಯು ಈ ಜಗದ ಬದುಕಿಗೆ ಅತ್ಯುತ್ತಮ ಮಾದರಿಯು.

ಈ ವ್ಯವಸ್ಥೆಯನ್ನು ನಮ್ಮ ಪೂರ್ವಜರು; ತಮ್ಮ ಅತ್ಯಮೂಲ್ಯವಾದ ಜೀವ,ಜೀವನ ಸಂಪತ್ತನ್ನು- ತಮ್ಮ ತ್ಯಾಗ, ಹೋರಾಟ, ಬಲಿದಾನದ ಮೂಲಕ ನಮಗೆ ಗಳಿಸಿ, ಉಳಿಸಿ, ಬೆಳಸಿ ಕೊಂಡು ಬಾಳಲು ಬಿಟ್ಟು ಹೋಗಿದ್ದಾರೆ. 

ಇಂತಹ ಅತ್ಯಪೂರ್ವವಾದ ವ್ಯವಸ್ಥೆಯ ಕನಸನ್ನು ನಮ್ಮ ಬಸವಾದಿಶರಣರು; ಹನ್ನೆರಡನೆಯ ಶತಮಾನದಲ್ಲಿಯೇ ರಾಜಪ್ರಭುತ್ವದ ಗರ್ಭದಲ್ಲಿ ಇದ್ದುಕೊಂಡು ಕಂಡವರು.ಹಾಗೂ ಅದನ್ನು ತಮ್ಮ ಪರಿಶುದ್ಧ ವಾದ ನಡೆ ನುಡಿಯ ತತ್ವ ಸಿದ್ಧಾಂತಗಳ ಸುಂದರ ಸಾಂಗತ್ಯವನ್ನು ವಾಸ್ತವವಾಗಿ ಕಲ್ಯಾಣ ಪಟ್ಟಣದ "ಅನುಭವ ಮಂಟಪ"ದ ಪರಿಧಿ ಯಲ್ಲಿ ಅಕ್ಷರಶಃ ಕ್ರಾಂತಿಕಾರಿ ವಚನ ಚಳುವಳಿಯ ಮೂಲಕ ಆಚರಣೆಗೆ ತಂದವರು.

ಇಂತಹ ಸುಂದರ ಕನಸನ್ನು, ಒಂಭತ್ತು ನೂರು ವರ್ಷಗಳ ಹಿಂದೆಯೇ ನನಸು ಮಾಡಿ ತೋರಿದ ನಮ್ಮ ವೀರ ಧೀರರಾದ ಬಸವಾದಿ ಶರಣರನ್ನು, ಪಟ್ಟಭದ್ರ ಸ್ಥಾಪಿತ ವೈದಿಕಶಾಹಿ ಪುರೋಹಿತ ವರ್ಗದ ಕುತಂತ್ರಿ ಮನಸುಗಳು, ತಮ್ಮೊಳಗಿನ ಮಾತ್ಸರ್ಯ ಮತ್ತು ಕ್ರೌರ್ಯವನ್ನು ಅತ್ಯಂತ ಬರ್ಬರವಾಗಿ ಮೆರೆದು,ಬಸವಾದಿ ಶರಣರನ್ನು ಬೆನ್ನಟ್ಟಿ ಕೊಂದರು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರತ್ಯುತ್ಪನ್ನುಗಳಾದ ವಚನ ಸಾಹಿತ್ಯ ಸಂಪತ್ತಿನ ಕಟ್ಟುಗಳನ್ನು ಕಸಿದುಕೊಂಡು ಸುಟ್ಟು, ತಮ್ಮಅಟ್ಟಹಾಸದ ದೌರ್ಜನ್ಯವನ್ನು ನಿರ್ದಯವಾಗಿ ಮೆರೆದಿರುವುದು ಇತಿಹಾಸದ ರಕ್ತರಂಜಿತ ದುರಂತ ಕಥೆಯಾಗಿ ಇಂದಿಗೂ ಜನಮಾನಸದಲ್ಲಿ ಜೀವಂತ ಜಂಗಮವಾಗಿದೆ.

" 'ಸ್ಥಾವರ'ಕ್ಕಳಿವುಂಟು, 'ಜಂಗಮ'ಕ್ಕಳಿವಿಲ್ಲ " ಎಂಬ ಶರಣರ ನಿಜದ ನುಡಿಗಳಿಗೆ ಸಾಕ್ಷಿಯಾಗಿ, ಇಂದಿನ "ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆ"ಯ ಹೋರಾಟವು ನಮ್ಮ ಮುಂದಿದೆ.

ಹಾಗೆಯೇ, ಪ್ರಸ್ತುತದಲ್ಲಿರುವ ನಮ್ಮ ಪ್ರಜಾಪ್ರಭುತ್ವ ಯಾ ಪ್ರಜಾಸತ್ತಾತ್ಮಕ ವ್ಯವಸ್ಥೆಯು ರೋಗಗ್ರಸ್ಥವಾಗಿರುವುದೂ ನಗ್ನಸತ್ಯವಾಗಿದೆ.

ಈ ಸ್ಥಿತಿಗತಿಯ ಕುರೂಪಕ್ಕೆ, ಹಾಗೂ ಅದರ ಮೌಲಿಕ ಆರೋಗ್ಯಕ್ಕೆ; ದಿವ್ಯೌಷಧವಾಗಿ, ಬಸವಾದಿಶರಣರ ಸದಾಶಯದ ಕೂಸಾದ "ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆ"ಯ ಹೋರಾಟದ ಯಶಸ್ಸು; ಪರೋಕ್ಷವಾಗಿ ಸದ್ಯೋಭವಿಷ್ಯದಲ್ಲಿ ಖಂಡಿತಾ ಈ ನಮ್ಮ ಪ್ರಜಾಪ್ರಭುತ್ವ ಯಾ ಪ್ರಜಾಸತ್ತಾತ್ಮಕ ವ್ಯವಸ್ಥೆಗೂ ಗುಣಾತ್ಮಕ ಪರಿಣಾಮ ತರಬಲ್ಲ ಸಾಧ್ಯತೆಯನ್ನು ಅಂದು,'ಕಲ್ಯಾಣ ರಾಜ್ಯ'ದಲ್ಲಿ ಬಸವಾದಿ ಶರಣರು ಕನಸುಕಂಡು ಸಾಧಿಸಿದ ಈ ವ್ಯವಸ್ಥೆಯ ಆ ಯಶಸ್ಸು, ಆಶಾಕಿರಣವಾಗಿ ತೋರಬಲ್ಲದೆಂಬುದನ್ನು ಅಲ್ಲಗಳೆಯಲಾಗದು.

ಮತದಾನ; ಪ್ರಜಾಪ್ರಭುತ್ವ ಯಾ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಸರ್ವೋತ್ಕೃಷ್ಟ ಕರ್ತವ್ಯ. ಹಾಗೂ ಈ ವ್ಯವಸ್ಥೆಗೆ ಜೀವದಾನ ನೀಡುವ ಸಂಜೀವಿನಿಯಾಗಿದೆ.

ಇಂತಹ ಮಹತ್ವದ ನಿರ್ಮಾಣ ಕಾರ್ಯವನ್ನು ಭಾಜನರೆಲ್ಲರೂ ಪ್ರಜ್ಞಾವಂತಿಕೆಯಿಂದ ತಮ್ಮ ಮತ ಚಲಾಯಿಸುವ ಮೂಲಕ ನಿರ್ವಹಿಸ ಬೇಕಾಗುತ್ತದೆ.

- ಅಳಗುಂಡಿ ಅಂದಾನಯ್ಯ..

Like this post? Like & Follow us on Facebook so you never miss out.



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...