Tuesday, April 24, 2018

'ಡಾ| ರಾಜ್‌ಕುಮಾರ್ ಸಮಗ್ರ ಚರಿತ್ರೆ' ಪುಸ್ತಕದ ಬಗ್ಗೆ


ವರನಟ ಡಾ. ರಾಜ್‌ಕುಮಾರ್ ಬದುಕಿನ ಕುರಿತಾದ ಅನೇಕ ಪುಸ್ತಕಗಳು ಕನ್ನಡದ ಸಾರಸ್ವತ ಲೋಕದಲ್ಲಿವೆ. ಅವೆಲ್ಲವುಗಳನ್ನೂ ಮೀರಿಸುವ, ದೊಡ್ಡ ಹುಲ್ಲೂರು ರುಕ್ಕೋಜಿ ಬರೆದ ಅಪರೂಪದ ಎರಡು ಸಂಪುಟಗಳು ‘ಡಾ. ರಾಜ್‌ಕುಮಾರ್ ಸಮಗ್ರ ಚರಿತ್ರೆ’ ಹೆಸರಿನಲ್ಲಿ ರೂಪುಗೊಂಡಿವೆ. ಹಿರಿಯ ಪತ್ರಕರ್ತ, ಸಿನಿಮಾ ವಿಮರ್ಶಕ ದೊಡ್ಡ ಹುಲ್ಲೂರು ರುಕ್ಕೋಜಿ, ನಿರಂತರ ಹದಿನೈದು ವರ್ಷ ಈ ಪುಸ್ತಕಕ್ಕಾಗಿ ಸಂಶೋಧನೆ ಮಾಡಿದ್ದಾರೆ. 


"ಡಾ. ರಾಜ್ ಜೊತೆ ಸಿನಿಮಾ ಇತಿಹಾಸವನ್ನೂ ಹೇಳಿದ್ದೇನೆ" 
- ದೊಡ್ಡ ಹುಲ್ಲೂರು ರುಕ್ಕೋಜಿ..


ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ 'ರುಕ್ಕೋಜಿ' ಯವರ ಜೊತೆ 'ಶರಣು ಹುಲ್ಲೂರು' ಅವರು ನಡೆಸಿದ ಮಾತುಕತೆ. 'ವಿಜಯ ಕರ್ನಾಟಕ' ದಿನಪತ್ರಿಕೆಯಲ್ಲಿ ಈ ಅಂಕಣ ಮೂಡಿಬಂದಿತ್ತು. 

ಶರಣು ಹುಲ್ಲೂರು ಯಾರು? 

ಅವರ ಮಾತಿನಲ್ಲೇ ಕೇಳುವುದಾದರೆ.. "ಅಪ್ಪ ಅಮ್ಮ ಸೇರಿ ನನಗೆ ಹೆಸರಿಟ್ಟಿದ್ದು ಶರಣಪ್ಪ ಅಂತ. ನಾನು ಮನೆತನದ ಹೆಸರು ಅಡ್ನೂರ. ಹೀಗಾಗಿ ಶಾಲೆಯಲ್ಲಿ ಶರಣಪ್ಪ ಅಡ್ನೂರ ಅಂತ ಕರೆಯುತ್ತಿದ್ದರು. ಹುಟ್ಟಿದ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರು. ಊರಿನ ಅಭಿಮಾನಕ್ಕಾಗಿ ಮತ್ತು ನಾನು ಮಾಡರ್ನ ಜಗತ್ತಿಗೆ ಹೊಂದಿಕೊಳ್ಳುತ್ತಿದ್ದೇನೆ ಎಂಬ ಸೂಚಕವಾಗಿ ಶರಣು ಹುಲ್ಲೂರು ಅಂತ ಹೆಸರು ಬದಲಾಯಿಸಿಕೊಂಡೆ. ಸದ್ಯ ಕನ್ನಡದ ನಂಬರ್ 1 ದಿನ ಪತ್ರಿಕೆ ವಿಜಯ ಕರ್ನಾಟಕದಲ್ಲಿ ಹಿರಿಯ ವರದಿಗಾರನಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಶರಣು ಹುಲ್ಲೂರು ಅಂತಾನೆ ಪರಿಚಯ. ಕನ್ನಡದ ಅನೇಕ ವಾಹಿನಿಗಳ ಧಾರಾವಾಹಿಗೆ ಕತೆ ಚಿತ್ರಕತೆ ಸಂಭಾಷಣೆ ಬರೆದಿದ್ದೇನೆ. ಕತೆ, ಕವಿತೆಗಳು ಸೇರಿದಂತೆ ಏಳು ಪುಸ್ತಕಗಳು ಬಿಡುಗಡೆ ಆಗಿವೆ. ಹಂಪಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಕೈಗೊಂಡಿದ್ದೇನೆ"  
_________________________________


1. ಈಗಾಗಲೇ ಡಾ. ರಾಜ್‌ಕುಮಾರ್ ಹಲವು ಮಜಲುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪುಸ್ತಕದ ವಿಶೇಷತೆ ಏನು? 

- ಡಾ. ರಾಜ್‌ಕುಮಾರ್ ಕುರಿತು ಹೇಳುತ್ತಾ, ಸಿನಿಮಾರಂಗದ ಇತಿಹಾಸವನ್ನೂ ಹೇಳುವ ಪ್ರಯತ್ನ ಇಲ್ಲಿದೆ. ಒಟ್ಟು ಎರಡು ಸಂಪುಟಗಳು. 2148 ಪುಟಗಳು. ಮೊದಲ ಸಂಪುಟದಲ್ಲಿ ರಾಜ್‌ಕುಮಾರ್ ಜೀವನ. ಎರಡನೆಯ ಸಂಪುಟದಲ್ಲಿ ಡಾ.ರಾಜ್ ಅಭಿನಯದ ಚಲನಚಿತ್ರಗಳ ವಿವರ ಸೇರಿಕೊಂಡಿವೆ. ಬರೆಯೋಕೆ ಶುರುವಾಗಿದ್ದು 2005ರಲ್ಲಿ. ಅಲ್ಲಿಂದ ನಿರ್ಮಾಪಕ, ನಿರ್ದೇಶಕ, ಕಲಾವಿದರು, ತಂತ್ರಜ್ಞರು ಹಾಗೂ ಡಾ.ರಾಜ್ ಕುಟುಂಬದವರನ್ನೂ ಒಳಗೊಂಡಂತೆ 142 ಜನರ ಸಂದರ್ಶನ ಪುಸ್ತಕದಲ್ಲಿದೆ. ಪುಸ್ತಕಕ್ಕಾಗಿಯೇ 20000ಕ್ಕೂ ಅಧಿಕ ಛಾಯಾಚಿತ್ರಗಳನ್ನುಸಂಗ್ರಹ ಮಾಡಲಾಗಿದೆ. 8700ಕ್ಕೂ ಅಧಿಕ ಚಿತ್ರಗಳು ಬಳಕೆ ಆಗಿವೆ. 

______________________________________

2. ಡಾ. ರಾಜ್ ಅವರನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ? 

- ಈ ವರನಟ, ಕರ್ನಾಟಕದ ಉಸಿರು. ರೈತರು, ಕಾರ್ಮಿಕರು, ಅಧಿಕಾರಿಗಳೂ ಸೇರಿದಂತೆ ಎಲ್ಲರಿಗೂ ಪ್ರಿಯವಾದವರು ರಾಜ್. ಹೀಗಾಗಿಯೇ ಅವರು ನನ್ನನ್ನು ಆಕರ್ಷಿಸಿದ್ದು. ನಾನು ಸಿನಿಮಾ ಪತ್ರಕರ್ತನಾದಾಗ ರಾಜ್ ಹುಟ್ಟುಹಬ್ಬಕ್ಕೆ, ಅವರ ಸಿನಿಮಾ ರಿಲೀಸ್ ಆದಾಗ ಸಂಪಾದಕೀಯ ಬರೆಯುತ್ತಿದ್ದೆ. ನಂತರ ಬೇರೆ ರೀತಿಯ ಅಧ್ಯಯನದಲ್ಲೇ ತೊಡಗಿದ್ದೆ. ಮುಂದೆ, ರಾಜಕುಮಾರ್ ಕುರಿತಾಗಿ ಪಿಎಚ್‌ಡಿ ಮಾಡಬೇಕು ಅಂತ ವಿಷಯ ಆಯ್ಕೆ ಮಾಡಿದ್ದು ಕಿ.ರಂ. ನಾಗರಾಜ್. ಆಗ ಡಾ. ಸಿದ್ಧಲಿಂಗಯ್ಯ ನನಗೆ ಗೈಡ್ ಆದರು. ‘ಕಾದಂಬರಿ ಆಧಾರಿತ ಡಾ. ರಾಜ್‌ಕುಮಾರ್ ಚಿತ್ರಗಳು ಮತ್ತು ಕನ್ನಡ ಕಥಾ ಸಾಹಿತ್ಯ’ ಶೀರ್ಷಿಕೆಯ ಅಡಿಯಲ್ಲಿ ಸಂಶೋಧನೆಗೆ ತೊಡಗಿಕೊಂಡೆ. ರಾಜ್ ಬಗೆಗಿನ ಸಂಶೋಧನೆ ಬರೀ ಪದವಿಗೆ ಮಾತ್ರ ಸೀಮಿತ ಆಗಬಾರದು ಅನಿಸಿತು. ಅಲ್ಲದೇ ಇನ್ನೂರು ಪುಟದಲ್ಲಿ ಅವರನ್ನು ಹಿಡಿದಿಡಲು ಸಾಧ್ಯವೇ ಆಗಲಿಲ್ಲ. ಹೀಗಾಗಿ ನಾನು ನದಿಯಿಂದ ಸಮುದ್ರಕ್ಕೆ ಜಿಗಿಯಬೇಕಾಯಿತು. 
______________________________________

3. ಸಂಶೋಧನಾ ಪುಸ್ತಕ ಅಕಾಡೆಮಿಕ್ ಮಾದರಿಯದ್ದು. ಈ ಪುಸ್ತಕದ ರೂಪ ಹೇಗಿದೆ?

- ಆಗಲೇ ನಾನು ಹೇಳಿದೆ, ಪಿಎಚ್‌ಡಿ ಸಂಶೋಧನೆಯನ್ನೂ ಮೀರಿ ಈ ಪುಸ್ತಕ ಬಂದಿದೆ ಅಂತ. ರಾಜ್‌ಕುಮಾರ್ ರನ್ನು ಬೇರೆ ರೀತಿಯಲ್ಲಿ ಅಭ್ಯಾಸ ಮಾಡುವವರಿಗೆ ರುಚಿಸುವ ಪುಸ್ತಕವಿದು. ಜೀವನ ಚರಿತ್ರೆಯ ಪ್ರಕಾರ ಮತ್ತು ಸಿದ್ಧ ಮಾದರಿಗಳ ಪ್ರಕಾರವನ್ನೂ ದೂರವಿಟ್ಟು ಪುಸ್ತಕ ಬರೆದಿದ್ದೇನೆ. 
_________________________________

4. ಸಿದ್ಧ ಮಾದರಿಯ ಹೊರತಾದ ನಿಮ್ಮ ಮಾದರಿ ಯಾವುದು? 

- ರಾಜ್‌ಕುಮಾರ್‌ರ ಬದುಕು ಮತ್ತು ಸಿನಿಮಾಗಳನ್ನು ಮೂರು ಆ್ಯಂಗಲ್‌ಗಳಿಂದ ನೋಡಿದ್ದೇನೆ. ಆರಂಭದ ಘಟನೆಗಳಿಗೆ ಚಿತ್ರಗಳು ಸಿಗುವುದು ವಿರಳ. ಹೀಗಾಗಿ ಅದನ್ನು ರೇಖಾ ಚಿತ್ರಗಳ ಮೂಲಕ ಕಟ್ಟಿಕೊಟ್ಟಿದ್ದೇನೆ. ಚಿತ್ರಕಲಾವಿದ ಚಂದ್ರನಾಥ್ ಆಚಾರ್ಯ ಒಂದೂವರೆ ವರ್ಷ ಕಾಲವಧಿ ಪಡೆದು ಚಿತ್ರಗಳನ್ನು ಬಿಡಿಸಿ ಕೊಟ್ಟಿದ್ದಾರೆ. ಸಾಂದರ್ಭಿಕ ಚಿತ್ರಗಳು, ಸಂದರ್ಶನಗಳ ಮೂಲಕ ಹೇಳಿದ್ದೇನೆ. ಜೀವನ ಮತ್ತು ಚಿತ್ರಜೀವನಕ್ಕೆ ಸಂಬಂಧಪಟ್ಟವರು ರಾಜ್‌ಕುಮಾರ್ ಬಗ್ಗೆ ಹೇಳಿದ್ದಾರೆ. ಇವರು ಈವರೆಗೂ ಮಾತಾಡದೇ ಇರುವಂಥವರು. ಆರೇಳು ನೂರು ಘಟನೆಗಳನ್ನು ಹೇಳಿಕೊಂಡಿದ್ದಾರೆ. ಇದೆಲ್ಲವನ್ನೂ ಅವರ ಮಾತಿನಲ್ಲೇ ಹಿಡಿದಿಟ್ಟಿದ್ದೇನೆ. 
______________________________________

5. ವಿಷಯ ಸಂಗ್ರಹಣೆಗೆ ಏನೆಲ್ಲ ಕಷ್ಟ ಪಡಬೇಕಾಯಿತು?

- ಒಂದೂವರೆ ದಶಕಗಳ ಓಡಾಟವೇ ಒಂದು ದಾಖಲೆ. ಚೆನ್ನೈ, ಮೈಸೂರು, ನಂಜನಗೂಡು, ಗಾಜನೂರು, ಸಾಲಿಗ್ರಾಮ, ಸಿಂಗಾನಲ್ಲೂರು, ಮುತ್ತತ್ತಿ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ಓಡಾಡಿ, 212 ಸಿನಿಮಾಗಳ ಸಮಗ್ರ ಮಾಹಿತಿ ಕಲೆ ಹಾಕಿದ್ದೇನೆ. ಅಪರೂಪದ ಛಾಯಾಚಿತ್ರ ಅನಿಸಿದಾಗ 25 ಸಾವಿರ ರೂ. ಕೊಟ್ಟು ಖರೀದಿಸಿದ್ದೇನೆ. ರಿಲೀಸ್ ಆದ ಇವರ ಚಿತ್ರಗಳಲ್ಲದೇ ಅಪೂರ್ಣಗೊಂಡ 42 ಚಿತ್ರಗಳ ಸಮಗ್ರ ಮಾಹಿತಿಯನ್ನೂ ಪುಸ್ತಕದಲ್ಲಿ ಸೇರಿಸಿದ್ದೇನೆ. ಇವುಗಳ ಹುಡುಕಾಟವೇ ದೊಡ್ಡದು. 
______________________________________

6. ಪುಸ್ತಕದಲ್ಲಿ ಥ್ರಿಲ್ ನೀಡುವಂಥ ಅಂಶಗಳು ಏನೇನಿವೆ? 

- ಚಿಕ್ಕವರಿದ್ದಾಗಲೇ ರಾಜ್‌ಕುಮಾರ್ ಶಾಸ್ತ್ರೀಯ ಸಂಗೀತ ಕಲಿತವರು. ಬೆಂಗಳೂರು ಸುತ್ತಮುತ್ತ 12 ಸಂಗೀತ ಕಛೇರಿ ನೀಡಿದ್ದಾರೆ. ಆ ದಾಖಲೆ ಇಲ್ಲಿದೆ. ಹಾರ್ಮೋನಿಯಮ್ ಮತ್ತು ಸಿತಾರ್ ವಾದಕರೂ ಇವರಾಗಿದ್ದರು. ಇಂತಹ ಅಪರೂಪದ ವಿಷಯಗಳ ಸಂಗ್ರಹ ಇಲ್ಲಿದೆ. ಅಲ್ಲದೇ ಕೃತಿಯೊಂದು ಪ್ರಕಟನೆಗೆ ಮೊದಲು ಅದರ ಪ್ರಚಾರ ಪುಸ್ತಿಕೆ ಪ್ರಕಟವಾದದ್ದು ಇದೇ ಮೊದಲು. ಚರಿತ್ರೆಕಾರರಿಗೆ ಈ ಪುಸ್ತಕ ಕೊಟ್ಟಿದ್ದೆ. ಇಂತಹದ್ದೊಂದು ಚರಿತ್ರೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಬರುತ್ತಿದೆ ಅಂದಾಗ ಖುಷಿ ಆಯಿತು. ಜತೆಗೆ ಸಾಹಿತ್ಯ ಕೃತಿಯೊಂದಕ್ಕೆ ಸಂಬಂಧಿಸಿದ ಅದರ ಸಿದ್ಧತೆಯ ಸಂಪೂರ್ಣ ವಿವರ ನೀಡುವ 80 ನಿಮಿಷ ಅವಧಿಯ ಸಾಕ್ಷ್ಯಚಿತ್ರ ನಿರ್ಮಾಣ ಆಗಿದೆ. ಇದು ದೇಶದಲ್ಲೇ ಮೊದಲ ಪ್ರಯತ್ನ. ಕನ್ನಡ ಪುಸ್ತಕ ಪ್ರಪಂಚದ ಇತಿಹಾಸದಲ್ಲೇ ಅತಿ ಹೆಚ್ಚು ವೆಚ್ಚದ ಪುಸ್ತಕವಿದು. 87 ಲಕ್ಷ ರೂ. ಖರ್ಚಾಗಿದೆ. 




No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...