Monday, April 23, 2018

ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರ 90ನೇ ಹುಟ್ಟುಹಬ್ಬದ ಶುಭಾಶಯಗಳು..


ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಡಾ| ರಾಜ್‌ಕುಮಾರ್ ಅವರದೇ ಒಂದು ಪ್ರತ್ಯೇಕ ಅಧ್ಯಾಯ. ಕನ್ನಡ ಚಿತ್ರರಂಗದ ಪುಟಪುಟವನ್ನೂ ಆವರಿಸಿಕೊಂಡಿರುವ ಡಾ| ರಾಜ್‌ಕುಮಾರ್ ಕನ್ನಡ ಚಿತ್ರರಂಗ ಕಂಡ ವರ್ಣರಂಜಿತ ನಾಯಕ ನಟ. 

12 ವರ್ಷದ ಬಾಲ ನಟನಾಗಿರುವಾಗಲೇ ಚಲನಚಿತ್ರರಂಗ ಪ್ರವೇಶಿಸಿದ ಡಾ|ರಾಜ್‌ಕುಮಾರ್ ಅವರು ಅಭಿನಯಿಸದ ಪಾತ್ರವೇ ಇಲ್ಲ. ಅವರು ನಡೆದು ಬಂದ ಹಾದಿಯೇ ಒಂದು ಚರಿತ್ರೆ. ಹೀಗಾಗಿ ಭಾರತ ಸರ್ಕಾರ, ಚಲನಚಿತ್ರ ಪಿತಾಮಹ ದಾದಾಸಾಹೇಬ ಫಾಲ್ಕೆ ಅವರ ಹೆಸರಿನಲ್ಲಿ ನೀಡುವ, ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿ “ಫಾಲ್ಕೆ ಪ್ರಶಸ್ತಿ” ಯನ್ನು 1996 ರಲ್ಲಿ ಡಾ| ರಾಜ್‌ಕುಮಾರ್ ಅವರಿಗೆ ನೀಡಿ ಗೌರವಿಸಿದೆ. ಕನ್ನಡ ಚಲನಚಿತ್ರರಂಗದಲ್ಲಿ ಈ ಪ್ರಶಸ್ತಿ ಪಡೆದ ಮೊದಲಿಗರು ಡಾ| ರಾಜ್‌ಕುಮಾರ್.
______________________________________ 

ಹನ್ನೆರಡು ವರ್ಷದ ಬಾಲಕನಾಗಿರುವಾಗ ಭಕ್ತ ಪ್ರಹ್ಲಾದ (1942) ಚಿತ್ರದಲ್ಲಿ ಬಾಲನಟನಾಗಿ ಎಸ್. ಪಿ. ಮುತ್ತುರಾಜ ಕಾಣಿಸಿಕೊಂಡರು. ನನ್ನ ಜೀವನದ ಪ್ರಥಮ ಚಿತ್ರ ಪ್ರಹ್ಲಾದ ಎಂದು ಡಾ| ರಾಜ್‌ಕುಮಾರ್, ದೀಪಾವಳಿ ಸಂಚಿಕೆ (1963) ಯೊಂದಕ್ಕೆ ನೀಡಿದ ಬರಹದಲ್ಲಿ ತಿಳಿಸಿದ್ದರು. ನಂತರ 1952 ರಲ್ಲಿ ಮಹಾತ್ಮ ಪಿಕ್ಚರ್ಸ್‌ರವರ ತಯಾರಿಕೆಯಲ್ಲಿ ಶ್ರೀನಿವಾಸ ಕಲ್ಯಾಣದಲ್ಲಿ ಋಷಿಯೊಬ್ಬನ ಪಾತ್ರ ಸಿಕ್ಕಿತು. 

ಸಪ್ತ ಋಷಿಗಳಲ್ಲಿ ಒಬ್ಬರಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಒಂದೇ ಒಂದು ಸಂಭಾಷಣೆ ಹೇಳುವ ಅವಕಾಶ ದೊರಕಿತು. ಬಿಡುಗಡೆಯಾದ ನಂತರ ಚಿತ್ರದಲ್ಲಿ ಸಂಭಾಷಣೆ ಇತ್ತೋ ಇಲ್ಲವೋ ಎಂಬುದು ರಾಜಕುಮಾರ್ ಅವರಿಗೂ ನೆನಪಿಲ್ಲ. 1954 ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ನಾಯಕ. ನಿರ್ದೇಶಕ ಎಚ್. ಎಲ್. ಎನ್. ಸಿಂಹ ಅವರಿಂದ ಮುತ್ತುರಾಜ್‌ಗೆ “ರಾಜ್‌ಕುಮಾರ್” ಎಂಬ ಹೊಸ ಹೆಸರಿನ ನಾಮಕರಣ.
______________________________________ 

ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಎಂದರೆ ಆ ಕಾಲದಲ್ಲಿ ರಂಗಭೂಮಿಯ ದೊಡ್ಡ ಹೆಸರು. ರೌದ್ರಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜ್ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿತು. 

ಗುಬ್ಬಿ ಕಂಪನಿಯೇ ವಿಶ್ವವಿದ್ಯಾನಿಲಯವಾಯಿತು. ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತುರಾಜ್‌ಗೆ ಅವರಿಂದಲೇ ತರಬೇತಿಯಾಯಿತು. ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರ ವಹಿಸುತ್ತಿದ್ದರು.

“ನನ್ನ ತಂದೆ ರಂಗದ ಮೇಲೆ ಹುರಿಮೀಸೆ ತಿರುಗಿಸುತ್ತಾ, ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ ಎಂತಹವರಿಗೂ ಒಂದು ಬಾರಿ ನಡುಕ ಬರುತ್ತಿತ್ತು” ಎಂದು ತಂದೆಯವರ ಅಭಿನಯವನ್ನು ಬಣ್ಣಿಸುವ ರಾಜ್‌ಕುಮಾರ್ ಅವರಿಗೆ ತಂದೆಯ ಅಭಿನಯ ಬಲು ಪ್ರಿಯ. ನಾನೂ ಅದೇ ರೀತಿ ಮಾಡಬೇಕೆಂದು “ಭಕ್ತ ಪ್ರಹ್ಲಾದ” ಚಿತ್ರದಲ್ಲಿ ಹಿರಣ್ಯಕಶಿಪು ಪಾತ್ರದಲ್ಲಿ ಅವರಂತೆ ಅಭಿನಯಿಸಲು ಸಾಧ್ಯವೇ ಎಂದು ಪ್ರಯತ್ನಿಸಿದೆ. ಆದರೆ ಬರಲಿಲ್ಲ ಎಂದು ಹೇಳಿದ್ದರು.
______________________________________ 


ರಾಜ್‌ ಅವರು ಪಾಠಶಾಲೆಯಲ್ಲಿ ಕಲಿಯಲಾಗದ್ದನ್ನು ಜೀವನದ ಶಾಲೆಯಲ್ಲಿ ನಾಟಕ ಚಲನಚಿತ್ರ ರಂಗಗಳಲ್ಲಿ ಕಲಿತರು, ಬೆಳೆದರು. ಮುಂದೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರು. ಶುದ್ಧ ಅಸ್ಖಲಿತ ಭಾಷಾಪ್ರಯೋಗ ಸ್ಪಷ್ಟ ಉಚ್ಛಾರಣೆಗಳಿಂದಾಗಿ ಕನ್ನಡ ಭಾಷೆಯನ್ನು ಹೇಗೆ ಉಪಯೋಗಿಸ ಬೇಕೆಂಬುದಕ್ಕೆ ಒಬ್ಬ ಮಾದರಿವ್ಯಕ್ತಿಯಾಗುಳಿಯುತ್ತಾರೆ. 

ಕನ್ನಡದಷ್ಟೇ ಪಾತ್ರೋಚಿತವಾಗಿ ಬರುತ್ತಿದ್ದ ಸಂಸ್ಕೃತ ಮತ್ತೂ ಇಂಗ್ಲೀಷ್ ನುಡಿಗಟ್ಟುಗಳನ್ನು ಎಷ್ಟು ಅಚ್ಚುಕಟ್ಟಾಗಿ ಸಂಭಾಷಣೆ ಜೊತೆಗೆ ಉಪಯೋಗಿಸುತ್ತಿದ್ದರೆಂದರೆ ಅವರು ಆ ಭಾಷೆಗಳಲ್ಲಿ ಪರಿಣಿತರೇನೋ ಎಂಬಷ್ಟು ಛಾಪು ಅವರದಾಗಿರುತ್ತಿತ್ತು.



ಪ್ರಶಸ್ತಿಗಳು: 
  • ಪದ್ಮಭೂಷಣ (ಭಾರತ ಸರ್ಕಾರದಿಂದ)
  • ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (1995 ರಲ್ಲಿ ಭಾರತ ಸರ್ಕಾರದಿಂದ)
  • ಕರ್ನಾಟಕ ರತ್ನ (ಕರ್ನಾಟಕ ಸರ್ಕಾರ)
  • ರಾಷ್ಟ್ರಪ್ರಶಸ್ತಿ (ಜೀವನ ಚೈತ್ರ ಚಿತ್ರದಲ್ಲಿನ 'ನಾದಮಯ ಈ ಲೋಕವೆಲ್ಲಾ' ಹಾಡಿನ ಗಾಯನಕ್ಕೆ)
  • ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿ (ಹತ್ತು ಬಾರಿ)
  • ಅತ್ಯುತ್ತಮ ನಟ ರಾಜ್ಯಪ್ರಶಸ್ತಿ (ಒಂಬತ್ತು ಬಾರಿ)
  • ಕೆಂಟಕಿ ಕರ್ನಲ್ (ಅಮೆರಿಕದ ಕೆಂಟಕಿ ರಾಜ್ಯದ ಗವರ್ನರ್ 1985 ರಲ್ಲಿ ಬೆಂಗಳೂರಲ್ಲಿ ನೀಡಿದರು)
  • ನಾಡೋಜ ಪ್ರಶಸ್ತಿ (ಕನ್ನಡ ವಿಶ್ವವಿದ್ಯಾಲಯ, ಹಂಪಿ)
  • ಗುಬ್ಬಿ ವೀರಣ್ಣ ಪ್ರಶಸ್ತಿ (ಕರ್ನಾಟಕ ಸರ್ಕಾರ)
  • ಕಲಾ ಕೌಸ್ತುಭ (ವೃತ್ತಿ ರಂಗಭೂಮಿಗೆ ಸಲ್ಲಿಸಿದ ಸೇವೆಗೆ, ಕರ್ನಾಟಕ ಸರ್ಕಾರದಿಂದ) 

ಪದವಿಗಳು:
  • ಗೌರವ ಡಾಕ್ಟರೇಟ್ (ಮೈಸೂರು ವಿಶ್ವವಿದ್ಯಾಲಯ) 

ಬಿರುದುಗಳು
  • ನಟಸಾರ್ವಭೌಮ (100 ನೆಯ ಚಿತ್ರದ ಸಂದರ್ಭದಲ್ಲಿ)
  • ಗಾನಗಂಧರ್ವ (ಅಭಿಮಾನಿ ಸಂಘಗಳಿಂದ)
  • ವರನಟ (ಪತ್ರಕರ್ತರು, ಅಭಿಮಾನಿಗಳು)
  • ಅಣ್ಣಾವ್ರು (ಅಭಿಮಾನಿಗಳಿಂದ)
  • ರಸಿಕರ ರಾಜ (ಅಭಿಮಾನಿಗಳಿಂದ)
  • ಕನ್ನಡದ ಕಣ್ಮಣಿ (ಅಭಿಮಾನಿಗಳಿಂದ)
  • ಮೇರು ನಟ (ಅಭಿಮಾನಿಗಳಿಂದ) 

ಕನ್ನಡ ಚಿತ್ರರಂಗದ ಎವರ್​ ಗ್ರೀನ್​ ಸೂಪರ್​ಸ್ಟಾರ್​. ಮಾತ್ರವಲ್ಲ, ಭಾರತೀಯ ಚಿತ್ರರಂಗ ಕಂಡ ಮೇರು ಕಲಾವಿದ ಡಾ. ರಾಜ್​​ಕುಮಾರ್​​. ವಿನಯವನ್ನೇ ವಿದ್ವತ್ತಾಗಿಸಿದವರು, ಹಣಕ್ಕೆ ಅಂಟಿಕೊಳ್ಳದೆ ಶ್ರೀಮಂತರಾದವರು, ಜಾತಿಯನ್ನು ಮೀರಿದ ಸಾಮಾಜಿಕ ರೂಪಕವೂ ಆದರು, ಅವರ ಸಾಂಸ್ಕೃತಿಕ ವಿವೇಕಕ್ಕೆ ಸಾವಿಲ್ಲ. 


ಕೆಲವರಿಗೆ ರಾಜ್‌ಕುಮಾರ್ ಅವರ ಕೊಡುಗೆಯ ಬಗ್ಗೆ ಅನಗತ್ಯ ಅನುಮಾನಗಳಿವೆ. ಅವರು ದೊಡ್ಡ ಕಲಾವಿದರೆಂಬುದು ನಿಜ. ಆದರೆ ಸಮಾಜಕ್ಕೆ, ಜನರಿಗೆ, ಅವರ ಕೊಡುಗೆ ಏನು? ಎಂಬ ಪ್ರಶ್ನೆಯನ್ನು ನಿರಂತರವಾಗಿ ಕೇಳುವವರು ಇದ್ದಾರೆ. ಅಂತಹವರ ಪ್ರಶ್ನೆಗಳಿಗೆ ಉತ್ತರವಾಗಿ ಡಾ. ಬರಗೂರು ರಾಮಚಂದ್ರಪ್ಪ ನವರು ಬರೆದ ಲೇಖನ: 'ಓದಲು ಇಲ್ಲಿ ಕ್ಲಿಕ್ ಮಾಡಿ'

"Dr. Raj was a simple man, down to earth despite his stature as a great star. He was fond of me. I'm grateful and thankful to him. His personality appeals to the common man. Give him any role, a mythological character, a common man, a modern man... whatever. He had the ability to perform to perfection. He has influenced me a great deal"

- Amitabh Bachchan





No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...