"ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.."
ಯುಗಾದಿಯು ನಮ್ಮೆಲ್ಲರ ಬದುಕಿನಲ್ಲಿ ಜಯ ತರಲಿ, ಸುಖ-ಸಮೃದ್ಧಿ ನೆಲೆಸಲಿ ಎಂದು ನಾವು ಹಾರೈಸುತ್ತೇವೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು....
ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು.
ಈ ದಿನದ ಮಹತ್ವದ ಬಗ್ಗೆ ಪುರಾಣದಲ್ಲಿ ಉಲ್ಲೇಖಿಸಿದಂತೆ ಸರ್ವೋಚ್ಚ ಸೃಷ್ಟಿಕರ್ತ ಬ್ರಹ್ಮ ದೇವನು, ಈ ಮಂಗಳಕರ ದಿನದಂದು ಬ್ರಹ್ಮಾಂಡದ ಸೃಷ್ಟಿಯ ಆರಂಭಿಸಿದರು ಎಂದು ನಂಬಲಾಗಿದೆ. ಇದೇ ಈ ದಿನದ ಹಾಗು ಹಬ್ಬದ ಪ್ರಾಮುಖ್ಯತೆ. ಬ್ರಹ್ಮದೇವನು ಸಮಯದ ಎಣಿಕೆ ಇರಿಸಿಕೊಳ್ಳಲು ದಿನ, ವಾರ, ತಿಂಗಳು ಮತ್ತು ವರ್ಷಗಳನ್ನೂ ಕೂಡ ರಚಿಸಿದ್ದರು ಎಂದು ತಿಳಿಯಲಾಗಿದೆ.
ಇದಲ್ಲದೆ, ಭಾರತದ ಖ್ಯಾತ ಗಣಿತಶಾಸ್ತ್ರಜ್ಞರಾದ ಭಾಸ್ಕರಾಚಾರ್ಯರ ಲೆಕ್ಕಾಚಾರದ ಪ್ರಕಾರ, ಯುಗಾದಿಯಂದಾಗುವ ಸೂರ್ಯೋದಯದೊಂದಿಗೆ ಹೊಸ ವರ್ಷ, ಹೊಸ ತಿಂಗಳು ಹಾಗೂ ಹೊಸ ದಿನ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ. ಇದಲ್ಲದೆ ಸೂರ್ಯ ತನ್ನ ಸ್ಥಾನ ಬದಲಿಸುತ್ತಾನೆ. ದಕ್ಷಿಣ ಗೋಳಾರ್ಧದಿಂದ ಉತ್ತರ ಗೋಳಾರ್ಧಕ್ಕೆ ಬದಲಾಗುತ್ತಾನೆ.
ಕರ್ನಾಟಕದಲ್ಲಿ ಚಂದ್ರಮಾನ ಪದ್ಧತಿ ಜಾರಿಯಲ್ಲಿದೆ. ವೇದಾಂಗ ಜ್ಯೋತಿಷ್ಯದಂತೆ ಮೊದಲ ನಕ್ಷತ್ರ ಅಶ್ವಿನಿ. ಅಶ್ವಿನಿ ನಕ್ಷತ್ರಕ್ಕೆ ರವಿ ಪ್ರವೇಶವನ್ನು ಹೊಸ ವರ್ಷವೆಂದು ಕರೆಯಲಾಗುತ್ತದೆ. ಯುಗಾದಿಯಿಂದ ವಸಂತ ಮಾಸ ಆರಂಭವಾಗುತ್ತದೆ. ಗಿಡ-ಮರಗಳು ಚಿಗುರೊಡೆಯುತ್ತವೆ.
ಬೇವು-ಬೆಲ್ಲ :
ಬೇವು ಬೆಲ್ಲವನ್ನು ಸವಿಯುವ ಮುಖ್ಯ ಉದ್ದೇಶವೂ ಇದೆ. ಬೇವು ಬೆಲ್ಲವನ್ನು ಜೀವನದ ಸುಖದುಃಖಗಳ ಸಂಕೇತವಾಗಿ ಹೊಸವರ್ಷ ಯುಗಾದಿಯ ದಿನ ಸವಿಯಲಾಗುತ್ತದೆ.
ಅದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬೇವು ಉತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು , ಔಷಧಿ ಉಪಯುಕ್ತ ಸಸ್ಯವಾಗಿದೆ. ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ ಬೆಲ್ಲವೂ ಉತ್ತಮ ಪ್ರೋಟಿನ್, ಖನಿಜಾಂಶವನ್ನು ಹೊಂದಿದ್ದು , ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಬೇವು-ಬೆಲ್ಲದ ಮಿಶ್ರಣ ತಯಾರಿ ಹೇಗೆ ?
ಎಳೆಸಾದ ಬೇವಿನ ಚಿಗುರು ಹೂಗಳನ್ನು ಬೆಲ್ಲದ ಪುಡಿಯೊಂದಿಗೆ ಸೇರಿಸಿ ಸವಿಯುವುದು ಸಾಮಾನ್ಯ. ಬೇವಿನ ಹೂ, ಚಿಗುರು, ಬೆಲ್ಲದ ಪುಡಿ, ಕಾಳುಮೆಣಸಿನ ಪುಡಿ, ಹಸಿ ಹುಣಸೇ ಹಣ್ಣು ಮಾವಿನಕಾಯಿ ತುರಿ ಮಿಶ್ರ ಮಾಡಿ ಸವಿಯುವುದು ದೇಹದ ಆರೋಗ್ಯಕ್ಕೆ ಉತ್ತಮ, ಜೊತೆಗೆ ಕೋಪವನ್ನು ಕಡಿಮೆ ಗೊಳಿಸುವಲ್ಲಿ, ಮನಸ್ಸಿಗೆ ಹರ್ಷವನ್ನು ನೀಡಿ ಚಟುವಟಿಕೆಯಿಂದಿರಲು, ದೇಹಕ್ಕೆ ಶಕ್ತಿಯನ್ನು ನೀಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
ಬೇವು-ಬೆಲ್ಲ ಸವಿಯುವ ಸಮಯ :
ಯುಗಾದಿ ಆಚರಣೆಯ ಹೆಸರಲ್ಲಿ ದೇವರ ಪೂಜೆಯ ನಂತರ ಮನೆಯ ಹಿರಿಯರು ಮನೆಮಂದಿಗೆಲ್ಲಾ ಬೇವುಬೆಲ್ಲ ನೀಡುವ ಸಂಪ್ರದಾಯವಿದೆ. ಬೇವುಬೆಲ್ಲವನ್ನು ಆದಷ್ಟು ತಿಂಡಿ ಊಟಕ್ಕೆ ಮೊದಲು ಸವಿಯುವುದು ಆರೋಗ್ಯಕ್ಕೆ ಉತ್ತಮ.
ಬೇವಿನ ಎಲೆಗಳ ಆಯ್ಕೆ :
ಬೇವಿನಲ್ಲಿ ನಾನಾ ಬಗೆಗಳಿವೆ ಕಾಡುಬೇವು, ಸಿಹಿಬೇವು ಇತ್ಯಾದಿ. ಕಾಡುಬೇವು ಒರಟಾದ ಎಲೆಗಳಾಗಿದ್ದು , ಕಹಿಯೊಂದಿಗೆ ರುಚಿ ಸ್ವಲ್ಪ ಒಗುರಾಗಿರುತ್ತದೆ. ಕಡು ಹಸಿರಾಗಿರುತ್ತವೆ. ಸಿಹಿಬೇವು ರುಚಿ ಕರವಾಗಿ ಇರುತ್ತದೆ ಆದರೆ ಎಲೆಗಳು ತೆಳುವಾಗಿ ತಿಳಿ ಹಸಿರಾಗಿರುತ್ತವೆ. ಸಾಮಾನ್ಯವಾಗಿ ಸಿಹಿ ಬೇವು ಸವಿಯಲು ಉತ್ತಮ.
ಬೆಲ್ಲದ ಆಯ್ಕೆ :
ಬೆಲ್ಲ ಎಂದಾಕ್ಷಣ ಕೆಂಪಾದ ಬಂಗಾರದ ಬಣ್ಣದ ಆಕರ್ಷಕ ಬೆಲ್ಲದ ಅಚ್ಚುಗಳಿಗೆ ಆಕರ್ಷಿತರಾಗುತ್ತೇವೆ. ಆದರೆ ಬಂಗಾರ ಬಣ್ಣದ ಬೆಲ್ಲಗಳು ಹೆಚ್ಚು ಸುಣ್ಣದಂಶವನ್ನು ಹೊಂದಿರುತ್ತವೆ ಇದು ಆರೋಗ್ಯದ ದೃಷ್ಟಿಯಿಂದ ಉತ್ತಮವಾದದ್ದಲ್ಲ. ಕಪ್ಪಾದ ಕಡು ಕೆಂಪು ಬಣ್ಣದ ಆರ್ಗಾನಿಕ್ ಮುದ್ದೆ ಬೆಲ್ಲ ಉತ್ತಮವಾದುದ್ದಾಗಿರುತ್ತದೆ.
ಯುಗಾದಿ ವಿಶೇಷ ಎಣ್ಣೆಸ್ನಾನ (ಅಭ್ಯಂಜನ) :
ಯುಗಾದಿ ಹಬ್ಬದ ವೇಳೆ ಎಣ್ಣೆಸ್ನಾನ ಮಾಡುವುದು ರೂಢಿಯಲ್ಲಿದೆ. ನಿತ್ಯದ ಸ್ನಾನಕ್ಕಿಂತ ಎಣ್ಣೆ ಸ್ನಾನ ವಿಶೇಷವಾದುದು. ಮೈಕೈಗೆಲ್ಲಾ ಎಣ್ಣೆ ಹಚ್ಚಿಕೊಂಡು ತಿದ್ದಿ ತೀಡಿದರೆ, ದೇಹ ನಿರಾಳವಾಗುತ್ತದೆ. ಕೆಲ ಸಮಯದ ಬಳಿಕ ಬಿಸಿನೀರಿನಲ್ಲಿ ಸ್ನಾನಮಾಡುವುದರಿಂದ ದೇಹ, ಮನಸಿಗೆ ಆಹ್ಲಾದವೆನಿಸುತ್ತದೆ.
ಪ್ರತಿ ಆಚರಣೆಗೂ ಮಹತ್ವವಿದೆ. ಅದೇ ರೀತಿ ಎಣ್ಣೆ ಸ್ನಾನಕ್ಕೆ ವೈಜ್ಞಾನಿಕ ಕಾರಣಗಳಿವೆ. ಅಭ್ಯಂಜನದಿಂದ ಚೈತನ್ಯ ಬರುತ್ತದೆ. ದೇಹ, ಕೂದಲು, ಕೈಕಾಲುಗಳಿಗೆ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ತ್ವಚೆಯೂ ಉತ್ತಮವಾಗಿರುತ್ತದೆ. ಹಾಗಾಗಿ ಈ ಹಬ್ಬದ ವೇಳೆಯಲ್ಲಿ ಎಣ್ಣೆಸ್ನಾನ ಮಾಡಿ ಹೊಸಬಟ್ಟೆ ಧರಿಸುತ್ತಾರೆ. ಎಣ್ಣೆ ಹಚ್ಚಿದ ದೇಹದ ತ್ವಚೆ ಮೃದುವಾಗುತ್ತದೆ.
No comments:
Post a Comment