Monday, October 30, 2017

ಬಸವಣ್ಣ ನವರ ವಚನಗಳು..


ಲೋಕದ ಡೊಂಕು ತಿದ್ದಲು, ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಎತ್ತಿ ಹಿಡಿಯಲು, ಜನ ಸಾಮಾನ್ಯರಲ್ಲಿ ಜೀವನ ಮೌಲ್ಯ, ಸಮಾನತೆಯ ಅರಿವು ಮೂಡಿಸಲು ಶುರುವಾದ ಸಾಮಾಜಿಕ ಕ್ರಾಂತಿಯ ಫಲವಾಗಿ ಸಿಕ್ಕ ಕಾಣಿಕೆಯೇ ವಚನಗಳು.

11ನೇ ಶತಮಾನ ದಕ್ಷಿಣದ ಚಾಲುಕ್ಯರ ಕಾಲದ ಮಾದರ ಚೆನ್ನಯ್ಯರಿಂದ ಶುರುವಾಗಿ, ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಮಂತ್ರಿಯಾಗಿದ್ದ ಬಸವಣ್ಣ ಅವರಿಂದ ಜನಪ್ರಿಯಗೊಂಡ ಈ ಸಾಹಿತ್ಯ ಪ್ರಕಾರ ಗದ್ಯ, ಪದ್ಯ ಮಿಶ್ರಿತ ವಿಶಿಷ್ಟ ಸಾಹಿತ್ಯ ಪ್ರಕಾರ.

ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರ 'ವಚನಗಳು'..

ಬಸವಣ್ಣ, ಅಕ್ಕ ನಾಗಮ್ಮ, ಜೇಡರ ದಾಸಿಮ್ಮಯ್ಯ, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಹೀಗೆ ವಚನಕಾರರ ಪಟ್ಟಿ ಬೆಳೆಯುತ್ತದೆ. ಆಂದೋಲನದ ಭಾಗವಾಗಿ ಬೆಳೆದ ಕ್ರಾಂತಿಕಾರಿ ಸಾಹಿತ್ಯ ಪ್ರಕಾರ ಜನ ಸಾಮಾನ್ಯರಿಗೆ ದಾರಿದೀಪವಾಗಿದೆ.
_______________________________________________

*** ಬಸವಣ್ಣ ನವರ ವಚನಗಳು *** 

1. ಶ್ರುತಿತತಿಶಿರದ ಮೇಲೆ
ಅತ್ಯತಿಷ್ಠದ್ದಶಾಂಗುಲನ ನಾನೇನೆಂಬೆನಯ್ಯ
ಘನಕ್ಕೆ ಘನಮಹಿಮನ
ಮನಕ್ಕಗೋಚರನ !?
ಅಣೋರಣೀಯಾನ್
ಮಹತೋ ಮಹೀಯಾನ್
ಮಹಾದಾನಿ ಕೂಡಲಸಂಗಮದೇವ..
__________________________________

2. ಸ್ವಾಮಿ ನೀನು, ಶಾಶ್ವತ ನೀನು.
ಎತ್ತಿದೆ ಬಿರುದ ಜಗವೆಲ್ಲರಿಯಲು.
ಮಹಾದೇವ, ಮಹಾದೇವ!
ಇಲ್ಲಿಂದ ಮೇಲೆ ಶಬ್ದವಿಲ್ಲ!
ಪಶುಪತಿ ಜಗಕ್ಕೆ ಏಕೋದೇವ;
ಸ್ವರ್ಗಮರ್ತ್ಯ ಪಾತಾಳದೊಳಗೊಬ್ಬನೇ ದೇವ;
ಕೂಡಲಸಂಗಮದೇವ..
__________________________________

3. ಭಕ್ತಿಯೆಂಬ ಫೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು!
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು!
ಆಚಾರವೆಂಬ ಕಾಯಾಯಿತ್ತು!!
ನಿಷ್ಪತ್ತಿಯೆಂಬ ಹಣ್ಣಾಯಿತ್ತು!!!
ನಿಷ್ಪತ್ತಿಯೆಂಬ ಹಣ್ಣು
ತೊಟ್ಟುಬಿಟ್ಟು ಕಳಚಿಬೀಳುವಲ್ಲಿ
ಕೂಡಲಸಂಗಮದೇವನು
ತನಗೆ ಬೇಕೆಂದೆತ್ತಿಕೊಂಡನು..
__________________________________

4. ಏನು ಮಾಡುವೆನೆನ್ನ ಪುಣ್ಯದ ಫಲವು!
ಶಾಂತಿಯ ಮಾಡಹೋದರೆ ಬೇತಾಳ ಮೂಡಿತ್ತು!
ಕೂಡಲಸಂಗಮದೇವನ ಪೂಜಿಸಿಹೆನೆಂದರೆ
ಭಕ್ತಿ ಎಂಬ ಮೃಗವೆನ್ನನಟ್ಟಿ ಬಂದು
ನುಂಗಿತಯ್ಯ!
__________________________________

5. ಮಾಡುವ ಭಕ್ತನ ಕಾಯ
ಬಾಳೆಯ ಕಂಬದಂತಿರಬೇಕು!
ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದರೆ
ಒಳಗೆ ಕೆಚ್ಚಿಲ್ಲದಿರಬೇಕು!
ಮೇಲಾದ ಫಲವ ನಮ್ಮವರು
ಬೀಜ ಸಹಿತ ನುಂಗಿದರು.
ಎನಗಿನ್ನಾವ ಭವವಿಲ್ಲ ಕಾಣಾ
ಕೂಡಲಸಂಗಮದೇವ..
__________________________________

6. ಲಜ್ಜೆಗೆಟ್ಟೆನು, ನಾಣುಗೆಟ್ಟೆನು,
ಕುಲಗೆಟ್ಟೆನು, ಛಲಗೆಟ್ಟೆನು,
ಸಂಗಾ, ನಿಮ್ಮ ಪೂಜಿಸಿ ಭವಗೆಟ್ಟೆನು ನಾನಯ್ಯ!
ಕೂಡಲಸಂಗಮದೇವಯ್ಯ,
ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನಯ್ಯ!
__________________________________

7. ಪರಚಿಂತೆ ಎಮಗೇಕಯ್ಯ ?
ನಮ್ಮ ಚಿಂತೆ ಎಮಗೆ ಸಾಲದೆ ?
ಕೂಡಲಸಂಗಯ್ಯ ಒಲಿದಾನೋ ಒಲಿಯನೋ
ಎಂಬ ಚಿಂತೆ
ಹಾಸಲುಂಟು ಹೊದಿಯಲುಂಟು!
__________________________________

8. ಸಕ್ಕರೆಯ ಕೊಡನ ತುಂಬಿ
ಹೊರಗ ಸವಿದರೆ ರುಚಿಯುಂಟೆ ?
ತಕ್ಕೈಸಿ ಭುಜತುಂಬಿ,
ಲಿಂಗಸ್ಪರ್ಶನವ ಮಾಡದೆ,
ಅಕ್ಕಟಾ, ಸಂಸಾರ ವೃಥಾ ಹೋಯಿತ್ತಲ್ಲ!
ಅದೇತರ ಭಕ್ತಿ ? ಅದೇತರ ಯುಕ್ತಿ ? ಕೂಡಿಕೊ!
ಕೂಡಲಸಂಗಮದೇವ.. 
__________________________________

9. ಭಕ್ತಿರತಿಯ ವಿಕಲತೆಯ
ಯುಕುತಿಯನೇನ ಬೆಸಗೊಂಬಿರಯ್ಯ ?
ಕಾಮಿಗುಂಟೇ ಲಜ್ಜೆ ನಾಚಿಕೆ ?
ಕಾಮಿಗುಂಟೇ ಮಾನಾಪಮಾನವು ?
ಕೂಡಲಸಂಗನ ಶರಣರಿಗೊಲಿದ
ಮರುಳನನೇನ ಬೆಸಗೊಂಬಿರಯ್ಯ ?
__________________________________

10. ಕಾಮ ಸಂಗವಳಿದು,
ಅನುಭಾವ ಸಂಗದಲುಳಿದವರನಗಲಲಾರೆ,
ಶಿವಂಗೆ ಮಿಗೆ ಒಲಿದವರನು
ನಾನು ಅಗಲಲಾರೆ ಕಾಣಾ ಕೂಡಲಸಂಗಮದೇವ.. 
__________________________________

11. ಮಾರಿಕವ್ವೆಯ ನೋಂತು ಕೊರಳಲ್ಲಿ ಕಟ್ಟಿಕೊಂಬರು.
ಸಾಲಬಟ್ಟರೆ ಮಾರಿಕೊಂಬರಯ್ಯ!
ಸಾಲಬಟ್ಟರೆ ಅವನೊತ್ತೆಯನಿಟ್ಟು ಕೊಂಡುಂಬರಯ್ಯ!
ಮಾರುವೋಗನೊತ್ತೆವೋಗ
ನಮ್ಮ ಕೂಡಲಸಂಗಮದೇವ..
__________________________________

12. ಅರಗು ತಿಂದರೆ ಕರಗುವ ದೈವವ,
ಉರಿಯ ಕಂಡರೆ ಮುರುಟುವ ದೈವವ,
ಎಂತು ಸರಿಯೆಂಬೆನಯ್ಯ!
ಅವಸರ ಬಂದರೆ ಮಾರುವ
ದೈವವನೆಂತು ಸರಿಯೆಂಬೆನಯ್ಯ!
ಅಂಜಿಕೆಯಾದರೆ ಹೂಳುವ
ದೈವವನೆಂತು ಸರಿಯೆಂಬೆನಯ್ಯ!
ಸಹಜಭಾವ ನಿಜೈಕ್ಯ
ಕೂಡಲಸಂಗಮದೇವನೊಬ್ಬನೇ ದೇವ.. 
__________________________________

13. ಹಾಳುಮೊರಡಿಗಳಲ್ಲಿ, ಊರ ದಾರಿಗಳಲ್ಲಿ;
ಕೆರೆ-ಭಾವಿ-ಹೂಗಿಡಂ-ಮರಂಗಳಲ್ಲಿ,
ಗ್ರಾಮಮಧ್ಯಂಗಳಲ್ಲಿ,
ಚೌಪಥ-ಪಟ್ಟಣ ಪ್ರವೇಶದಲ್ಲಿ, ಹಿರಿಯಾಲದ ಮರದಲ್ಲಿ
ಮನೆಯ ಮಾಡಿ,
ಕರೆವೆಮ್ಮೆ, ಹಸುಗೂಸು, ಬಸುರಿ, ಬಾಣತಿ, ಕುಮಾರಿ
ಕೊಡುಗೂಸೆಂಬರ ಹಿಡಿದುಂಬ, ತಿರಿದುಂಬ
ಮಾರಯ್ಯ, ಬೀರಯ್ಯ,
ಖೇಚರ ಗಾವಿಲ, ಅಂತರಬೆಂತರ,
ಕಾಳಯ್ಯ, ಮಾರಯ್ಯ, ಮಾಳಯ್ಯ, ಕೇತಯ್ಯಗಳೆಂಬ
ನೂರು ಮಡಕೆಗೆ ನಮ್ಮ ಕೂಡಲಸಂಗಮದೇವ
ಶರಣೆಂಬುದೊಂದು ದಡಿ ಸಾಲದೆ ?
__________________________________

14. ಆಗಳೂ ಲೋಗರ ಮನೆಯ ಬಾಗಿಲ
ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು,
ಹೋಗೆಂದರೆ ಹೋಗವು,
ನಾಯಿಂದ ಕರಕಷ್ಟ ಕೆಲವು ದೈವಂಗಳು!
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವ..
__________________________________

15. ಬಿದಿರೆಲೆಯ ಮೆಲಿದಂತಲ್ಲದೆ,
ರಸ ಪಡೆಯಲು ಬಾರದು.
ನೀರ ಕಡೆದರೆ, ಕಡೆದಂತಲ್ಲದೆ,
ಬೆಣ್ಣೆಯ ಪಡೆಯಲು ಬಾರದು.
ಮಳಲ ಹೊಸೆದರೆ, ಹೊಸೆದಂತಲ್ಲದೆ,
ಸರವಿಯ ಪಡೆಯಲು ಬಾರದು.
ನಮ್ಮ ಕೂಡಲಸಂಗಮದೇವನಲ್ಲದೆ
ಅನ್ಯ ದೈವಕ್ಕೆರಗಿದರೆ,
ಪೊಳ್ಳ ಕುಟ್ಟಿ ಕೈ ಪೋಟು ಹೋದಂತಾಯಿತ್ತಯ್ಯ!
__________________________________

16. ಇಬ್ಬರು ಮೂವರು ದೇವರೆಂದು
ಉಬ್ಬಿ ಮಾತನಾಡಬೇಡ.
ದೇವನೊಬ್ಬನೇ ಕಾಣಿರೋ.
ಇಬ್ಬರೆಂಬುದು ಹುಸಿ ನೋಡಾ.
ಕೂಡಲಸಂಗಮನಲ್ಲದಿಲ್ಲೆಂದಿತ್ತು ವೇದ..
__________________________________

17. ಅದುರಿತು ಪಾದಘಾತದಿಂದ ಧರೆ!
ಬಿದಿರಿದವು ಮಕುಟ ತಾಗಿ ತಾರಕಿಗಳು
ಉದುರಿದವು ಕೈತಾಗಿ ಲೋಕಂಗಳೆಲ್ಲ!
"ಮಹೀ ಪಾದಾಘಾತಾದ್ವ್ರಜತಿ ಸಹಸಾ ಸಂಶಯಪದಂ
ಪದಂ ವಿಷ್ಣೋರ್ಭ್ರಾಮ್ಯದ್ಭುಜಪರಿಘರುಗ್ಣಗ್ರಹಗಣಂ!
ಮುಹರ್ದ್ಯೌರ್ಧ್ವಸ್ತಾತ್ಯಂತ್ಯನಿಭೃತಜಟಾತಾಟಿತತಟಾ
ಜಗದ್ರಕ್ಷಾಯೈ ತ್ವಂ ನನು ವಹಸಿ ಭೌಮಾಂ ಚ ವಿಭುತಾಂ"
ನಮ್ಮ ಕೂಡಲಸಂಗಮದೇವ
ನಿಂದು ನಾಂಟ್ಯವನಾಡೆ!
__________________________________

18. ಹರನ ಕೊರಳಲ್ಲಿಪ್ಪ ಕರೋಟಿಮಾಲೆಯ
ಶಿರದ ಲಿಖಿತವ ಕಂಡು, ಮರುಳುತಂಡಗಳು
ಓದಿನೋಡಿ
"ಇವನಜ, ಇವ ಹರಿ, ಇವ ಸುರಪತಿ
ಇವ ಧರಣೀಂದ್ರ, ಇವನಂತಕ"ನೆಂದು
ಹರುಷದಿಂದ ಸರಸವಾಡುವುದ ಹರ ನೋಡಿ
ಮುಗುಳುನಗೆಯ ನಗುತ್ತಿದ್ದನು!
ಕೂಡಲಸಂಗಮದೇವ..
__________________________________

19. ಎತ್ತೆತ್ತ ನೋಡಿದಡತ್ತತ್ತ ನೀನೇ ದೇವ!
ಸಕಲ ವಿಸ್ತಾರದ ರೂಹು ನೀನೇ ದೇವ.
ವಿಶ್ವತಶ್ಚಕ್ಷು ನೀನೇ ದೇವ,
ವಿಶ್ವತೋಮುಖ ನೀನೇ ದೇವ.
ವಿಶ್ವತೋಬಾಹು ನೀನೇ ದೇವ.
ವಿಶ್ವತೋಪಾದ ನೀನೇ ದೇವ.
ಕೂಡಲಸಂಗಮದೇವ..
__________________________________

20. ಸಕಲ-ನಿಷ್ಕಲವ ಕೂಡಿಕೊಂಡಿಪ್ಪೆಯಾಗಿ
ಸಕಲ ನೀನೆ, ನಿಷ್ಕಲ ನೀನೇ ಕಂಡಯ್ಯ!
ವಿಶ್ವತಶ್ಚಕ್ಷು ನೀನೇ ದೇವ!
ವಿಶ್ವತೋಬಾಹು ನೀನೇ ದೇವ
ವಿಶ್ವತೋಮುಖ ನೀನೇ ದೇವ!
ಕೂಡಲಸಂಗಮದೇವ..
__________________________________

21. ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು.
ನಿಮಗೆರಗದ ಕಾರಣ ಕೊರಳಲ್ಲಿ ನೇಣು.
ಹಿಂಡಲೇಕೋ, ತೊಳೆಯಲೇಕೊ ?
ಮುಳುಮುಳುಗಿ ಮೂಗ ಹಿಡಿಯಲೇಕೋ ?
ಕೂಡಲಸಂಗನ ಶರಣರಲ್ಲಿ
ಡೋಹರಕಕ್ಕಯ್ಯನಾವ ತೊರೆಯಲ್ಲಿ ಮಿಂದ ?
__________________________________

22. ಕಣ್ಣಮುಚ್ಚಿ ಕನ್ನಡಿಯ ತೋರುವಂತೆ!

ಇರುಳು ಹಗಲಿನ ನಿದ್ರೆ ಸಾಲದೆ ?
ಬೆರಳನೆಣಿಸಿ ಪರಮಾರ್ಥವ ಹಡೆವುದು
ಚೋದ್ಯವಲ್ಲವೆ ಹೇಳಾ ?
ಮೂಗ ಮುಚ್ಚಿ ಮುಕ್ತಿಯ ಬಯಸುವ
ನಾಚಿಕೆಯಿಲ್ಲದವರ ನಾನೇನೆಂಬೆ ಕೂಡಲಸಂಗಮದೇವ..
__________________________________

23. ನೀರ ಕಂಡಲ್ಲಿ ಮುಳುಗುವರಯ್ಯ!

ಮರನ ಕಂಡಲ್ಲಿ ಸುತ್ತುವರಯ್ಯ!
ಬತ್ತುವ ಜಲವನೊಣಗುವ ಮರನ
ಮೆಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವ..
__________________________________

24. ಇಟ್ಟಯ ಹಣ್ಣ ನರಿ ತಿಂದು

ಸೃಷ್ಟಿ ತಿರುಗಿತೆಂಬಂತೆ,
ಮಟ್ಟಿಯನಿಟ್ಟ ದ್ವಿಜರ ಮಾತದೇಕೆ ?
ಹಗಲುಗಾಣದ ಗೂಗೆ ಇರುಳಾಯಿತ್ತೆಂದರೆ
ಜಗಕ್ಕೆ ಯಿರುಳಪ್ಪುದೆ ಮರುಳೆ ?
ಹೋಮದ ನೆವದಿಂದ ಹೋತನ ಕೊಂದು ತಿಂಬ
ಅನಾಮಿಕರೊಡನಾಡಿ ಗೆಲುವುದೇನು
ಕೂಡಲಸಂಗಮದೇವ..
__________________________________

25. ಹೊಲೆಯೊಳಗೆ ಹುಟ್ಟಿ ಕುಲವನರಸುವೆಯೆಲವೋ

ಮಾತಂಗಿಯ ಮಗ ನೀನು!
ಸತ್ತುದನೆಳೆವವನೆತ್ತಣ ಹೊಲೆಯ ?
ಹೊತ್ತು ತಂದು ನೀವು ಕೊಲುವಿರಿ!
ಶಾಸ್ತ್ರವೆಂಬುದು ಹೋತಿಂಗೆ ಮಾರಿ.
ವೇದವೆಂಬುದು ನಿಮಗೆ ತಿಳಿಯದು.
ನಮ್ಮ ಕೂಡಲಸಂಗನ ಶರಣರು
ಕರ್ಮವಿರಹಿತರು, ಶರಣಾಸನ್ನಹಿತರು,
ಅನುಪಮ ಚರಿತ್ರರು,
ಅವರಿಗೆ ತೋರಲು ಪ್ರತಿಯಿಲ್ಲವೋ..
__________________________________

26. ಮಾತಿನ ಮಾತಿಂಗೆ ನಿನ್ನ ಕೊಂದೆಹರೆಂದು

ಅಳು ಕಂಡಾ! ಎಲೆ ಹೋತೇ,
ವೇದವನೋದಿದವರ ಮುಂದೆ
ಅಳು, ಕಂಡಾ! ಎಲೆ ಹೋತೇ,
ಶಾಸ್ತ್ರವನೋದಿದವರ ಮುಂದೆ
ಅಳು, ಕಂಡಾ! ಎಲೆ ಹೋತೇ,
ನೀನತ್ತುದಕೆ ತಕ್ಕುದ ಮಾಡುವ ಕೂಡಲಸಂಗಮದೇವ..
__________________________________

27. ಗುಡಿಯೊಳಗಿದ್ದು ಗುಡಿಯ ನೇಣ ಕೊಯ್ದರೆ

ಗುಡಿಯ ದಡಿ ಬಿದ್ದು ಹಲ್ಲು ಹೋಹುದು ನೋಡಾ!
ಪೊಡವಿಗೀಶ್ವರನ ಗರ್ಭವಾಸದೊಳಗಿದ್ದು
ನುಡಿವರು ಮತ್ತೊಂದು ದೈವ ಉಂಟೆಂದು!
ತುಡುಗುಣಿ ನಾಯ ಹಿಡಿತಂದು ಸಾಕಿದರೆ
ತನ್ನೊಡಯಂಗೆ ಬೊಗಳುವಂತೆ ಕಾಣಾ
ಕೂಡಲಸಂಗಮದೇವ..
__________________________________

28. ಋಣ ತಪ್ಪಿದ ಹೆಂಡಿರಲ್ಲಿ,

ಗುಣ ತಪ್ಪಿದ ನಂಟರಲ್ಲಿ,
ಜೀವವಿಲ್ಲದ ದೇಹದಲ್ಲಿ ಫಲವೇನೋ ?
ಆಳ್ದನೊಲ್ಲದಾಳಿನಲ್ಲಿ,
ಸಿರಿತೊಲಗಿದರಸಿನಲ್ಲಿ
ವರವಿಲ್ಲದ ದೈವದಲ್ಲಿ ಫಲವೇನೋ ?
ಕಳಿದ ಹೂವಿನಲ್ಲಿ ಕಂಪನು,
ಉಳಿದ ಸೊಳೆಯಲ್ಲಿ ಪೆಂಪನು,
ಕೊಳೆಚೆನೀರಿನಲ್ಲಿ ಗುಣ್ಪನರಸುವಿರಿ!
ಮರುಳೆ, ವರಗುರು ವಿಶ್ವಕ್ಕೆಲ್ಲ
ಗಿರಿಜಾಮನೋವಲ್ಲಭ ಪರಮ ಕಾರುಣಿಕ
ನಮ್ಮ ಕೂಡಲಸಂಗಮದೇವ..
__________________________________

29. ಮಡಕೆ ದೈವ, ಮೊರ ದೈವ,

ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲ ನಾರಿ ದೈವ--ಕಾಣಿರೊ!
ಕೊಳಗ ದೈವ, ಗಿಣ್ಣಿಲು ದೈವ--ಕಾಣಿರೊ!
ದೈವ ದೈವವೆಂದು ಕಾಲಿಡಲಿಂಬಿಲ್ಲ!
ದೇವನೊಬ್ಬನೆ ಕೂಡಲಸಂಗಮದೇವ..
__________________________________

30. ಮೊರನ ಗೋಟಿಗೆ ಬಪ್ಪ ಕಿರುಕುಳದೈವಕ್ಕೆ

ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು.
ಕುರಿ ಸತ್ತು ಕಾವುದೆ ಹರ ಮುಳಿದವರ ?
ಕುರಿ ಬೇಡ, ಮರಿ ಬೇಡ
ಬರಿಯ ಪತ್ರೆಯ ತಂದು
ಮರೆಯದೇ ಪೂಜಿಸು ನಮ್ಮ ಕೂಡಲಸಂಗಮದೇವನ..
__________________________________

31. ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು,
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು,
ನನೆಯೊಳಗಣ ಪರಿಮಳದಂತಿದ್ದಿತ್ತು,
ನಿಮ್ಮ ನಿಲುವು ಕೂಡಲಸಂಗಮದೇವಾ,
ಕನ್ಯೆಯ ಸ್ನೇಹದಂತಿದ್ದಿತ್ತು.
__________________________________

32. ಕಾಳಿಯ ಕಣ್ ಕಾಣದಿಂದ ಮುನ್ನ,
ತ್ರಿಪುರ ಸಂಹಾರದಿಂದ ಮುನ್ನ,
ಹರಿವಿರಂಚಿಗಳಿಂದ ಮುನ್ನ,
ಉಮೆಯ ಕಳ್ಯಾಣದಿಂದ ಮುನ್ನ,
ಮುನ್ನ, ಮುನ್ನ, ಮುನ್ನ,
- ಅಂದಿಂಗೆಳೆಯ ನೀನು,
ಹಳೆಯ ನಾನು ಮಹಾದಾನಿ ಕೂಡಲಸಂಗಮದೇವಾ.
__________________________________

33. ಅಯ್ಯಾ, ನೀನು ನಿರಾಕಾರವಾಗಿರ್ದಲ್ಲಿ ನಾನು ಜ್ನಾನವೆಂಬ ವಾಹನವಾಗಿರ್ದೆ,
ಕಾಣಾ ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ,
ಕಾಣಾ ಅಯ್ಯಾ, ನೀನು ಆಕಾರವಾಗಿರ್ದಲ್ಲಿ ನಾನು ವೃಶ್ಹಭನೆಂಬ ವಾಹನವಾಗಿರ್ದೆ
ಕಾಣಾ ಅಯ್ಯಾ; ನೀನೆನ್ನ ಭವದ ಕೊಂದಿಹೆನೆಂದು ಜಂಗಮ ಲಾಂಚ್ಹನನಾಗಿ
ಬಂದಲ್ಲಿ ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ ಕೂಡಲಸಂಗಮದೇವಾ.
__________________________________

34. ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದೊಡೆ ನಿಮ್ಮಾಣೆ, ನಿಮ್ಮ
ಪ್ರಮಥರಾಣೆ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ, ಪ್ರಥಮ ಭವಾಂತರದಲ್ಲಿ
ಶಿಲಾದನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿಯೆನ್ನ
ನಿರಿಸಿಕೊಂಡಿರ್ದಿರಯ್ಯಾ, ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ
ಮಾಡಿ ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿಸಿಕೊಂಡಿರ್ದಿರಯ್ಯಾ, 
ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ
ಹೆಸರಿಟ್ಟು ಕರೆದು ನಿಮ್ಮ ಲೀಲಾ ವಿನೋದದಿಂದಿರಿಸಿಕೊಂಡಿರ್ದಿರಯ್ಯಾ,
ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ
ಹೆಸರಿಟ್ಟು ಕರೆದು ನಿಮ್ಮ ಮನಃ ಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ
ಹೆಸರಿಟ್ಟು ಕರೆದು ಸರ್ವಕಾಲ ಸಂಹಾರವ ಮಾಡಿಸುತ್ತಿರ್ದಿರಯ್ಯಾ.
ಆರನೆಯ ಭವಾಂತರದಲ್ಲಿ ವೃಶ್ಹಭನೆಂಬ ಗಣೇಶ್ವರನ ಮಾಡಿ
ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಏಳನೆಯ ಭವಾಂತರದಲ್ಲಿ ಬಸವನೆಂಬ ಗಣೇಶ್ವರನ ಮಾಡಿ
ಹೆಸರಿಟ್ಟು ಕರೆದು ನಿಮ್ಮೊಕ್ಕುದಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು
ಬರುತಿರ್ದೆನಯ್ಯಾ.
__________________________________

35. ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು
ಸುಖಿಯಾಗಿಯಾನು ಬದುಕಿದೆನಯ್ಯಾ. ಅದೇನು ಕಾರಣ
ತಂದೆಯಿಂದರಿದೆನಯ್ಯಾ. ಅರಿದರಿದು ನಿಮ್ಮ ಶರಣನು
ಆಚರಿಸುವಾಚರಣೆಯ ಕಂಡು ಕಣ್ದೆರೆದೆನಯ್ಯಾ ಕೂಡಲಸಂಗಮದೇವಾ.
__________________________________

36. "ಕರಿಘನ ಅಂಕುಶ ಕಿರಿದೆ" ನ್ನಬಹುದೆ? ಬಾರದಯ್ಯಾ.
"ಗಿರಿಘನ ವಜ್ರ ಕಿರಿದೆ" ನ್ನಬಹುದೆ? ಬಾರದಯ್ಯಾ. 
ತಮ್ಮಂಥ ಘನ ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯ. 
"ಮರಹು ಘನ ನಿಮ್ಮ ನೆನೆವ ಮನ ಕಿರಿದೆ" ನ್ನಬಹುದೆ? ಬಾರದಯ್ಯಾ
ಕೂಡಲಸಂಗಮದೇವಾ.
__________________________________

37. ಭವಬಂಧನ ಭವಪಾಶವಾದ ಕಾರಣವೇನಯ್ಯಾ?
ಹಿಂದಣ ಜನ್ಮದಲಿ ಲಿಂಗವ ಮರೆದೆನಾಗಿ,
ಹಿಂದಣ ಸಿರಿಯಲ್ಲಿ ಜಂಗಮನ ಮರೆದೆನಾಗಿ
ಅರಿದೋಡೀ ಸಂಸಾರವ ಹೊದ್ದಲೀವನೆ ಕೂಡಲಸಂಗಮದೇವಾ.
__________________________________

38. ಸಂಸಾರ ಸಾಗರನ ತೆರೆಕೊಬ್ಬಿ ಮುಖದ ಮೇಲೆ ಅಲೆಯುತ್ತಿದ್ದುದೇ ನೋಡಾ!
ಸಂಸಾರಸಾಗರ ಉರದುದ್ದವೇ? ಹೇಳಾ! ಸಂಸಾರ ಸಾಗರ ಕೂರಲುದ್ದವೇ?
ಹೇಳಾ? ಸಂಸಾರ ಸಾಗರ ಸಿರದುದ್ದವಾದ ಬಳಿಕ ಏನ ಹೇಳುವೆನಯ್ಯಾ?
ಅಯ್ಯಾ, ಅಯ್ಯಾ, ಎನ್ನ ಹುಯ್ಯಲ ಕೇಳಯ್ಯ? ಕೂಡಲಸಂಗಮದೇವಾ ನಾನೇನೆನುವೆನಯ್ಯಾ?
__________________________________

39. ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ!
ಇಂದೆನ್ನ ದೇಹಕ್ಕೆ ಗ್ರಹಣವಾಯಿತು,
ಇನ್ನೆಂದಿಗೆ ಮೋಕ್ಶವಹುದೋ ಕೂಡಲಸಂಗಮದೇವಾ.
__________________________________

40. ಇಲಿ ಗಡಹನೊಡ್ಡಿದಲ್ಲಿರ್ಪಂತೆ ಎನ್ನ ಸಂಸಾರ ತನು ಕೆಡುವನ್ನಕ್ಕ ಮಾಣದು;
ಹೆರರ ಬಾಧಿಸುವುದು ತನು ಕೆಡುವನ್ನಕ್ಕಮಾಣದು.
ಹೆರರ ಚ್ಹಿದ್ರಿಸುವುದು ತನು ಕೆಡುವನ್ನಕ್ಕ ಮಾಣದು
ಅಕಟಕಟಾ! ಸಂಸಾರಕ್ಕಾಸತ್ತೆ ಕೂಡಲಸಂಗಮದೇವಾ.
__________________________________

41. ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆನಗಾಯಿತ್ತಯ್ಯಾ!
ಅಕಟಕಟಾ ಸಂಸಾರ ವೃಥಾ ಹೋಯಿತಲ್ಲಾ!
ಕರ್ತುವೇ ಕೂಡಲಸಂಗಮದೇವಾ
ಇವ ತಪ್ಪಿಸಿ ಎನ್ನನು ರಕ್ಶಿಸಯ್ಯಾ.
__________________________________

42. ಶೂಲದ ಮೇಲಣ ವಿಭೋಗವೇನಾದೊಡೇನೋ?
ನಾನಾವರ್ಣದ ಸಂಸಾರ ಹಾವ-ಹಾವಡಿಗನ ಸ್ನೇಹದಂತೆ!
ತನ್ನಾತ್ಮ ತನಗೆ ಹಗೆಯಾದ ಬಳಿಕ ಬಿನ್ನಾಣವುಂಟೆ!
ಮಹಾದಾನಿ ಕೂಡಲಸಂಗಮದೇವಾ.
__________________________________

43. ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ,
ಎನ್ನನು ಕಾಯಯ್ಯಾ ಸಂಗಮದೇವಾ ಹುರುಳಿಲ್ಲ ಹುರುಳಿಲ್ಲ!
ಶಿವಧೋ! ಶಿವಧೋ!
__________________________________

44. ನಾನೊಂದು ನೆನೆದೊಡೆ ತಾನೊಂದು ನೆನೆವುದು,
ನಾವಿತ್ತಲೆಳೆ ದೊಡೆ ತಾನತ್ತಲೆಳೆವುದು;
ತಾ ಬೇರೆಯೆನ್ನನಳಲಿಸಿ ಕಾಡಿತ್ತು.
ತಾ ಬೇರೆಯೆನ್ನ ಬಳಲಿಸಿ ಕಾಡಿತ್ತು.
ಕೂಡಲಸಂಗನ ಕೂಡಿಹೆನೆಂದೊಡೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ!
__________________________________

45. ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ!
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ!
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ!
ಇದಾವ ಪರಿಯಲ್ಲಿ ಕಾಡಿತ್ತು ಮಾಯೆ
ಈ ಮಾಯೆಯ ಕಳೆವೊಡೆ ಯೆನ್ನಳವಲ್ಲ,
ನೀವೇ ಬಲ್ಲಿರಿ ಕೂಡಲಸಂಗಮದೇವಾ.
__________________________________

46. ಕೊಡೆವಿಡಿದು ಕುದುರೆಯ ದೃಢವುಳ್ಳ ರಾವುತನೇರಿ ಕೊಡೆ
ಕೋಟಿ, ಶೂರರು, ಹನ್ನಿಬ್ಬರಯ್ಯಾ! ಚ.ದ್ರಕಾಂತ ಗಿರಿಯ
ಗಜ ಬಂದು ಮೂದಲಿಸಿ ಅರಿದು ಕೊಲುವೊಡೆ ರಿಪುಗಳ ಕಲಿತನವನೋಡಾ!
ಅವಿಗೆಯೊಳಡಗಿದ ಪುತ್ಥಳಿಯ ರೂಹಿನಂತಾಯಿತ್ತು,
ಕೂಡಲಸಂಗಮದೇವಾ ನಿಮ್ಮ ಹೆಸರಿಲ್ಲದ ಹೆಸರು.
__________________________________

47. ಇಂದಿಗೆಂತು ನಾಳಿಗೆಂತು ಎಂದು ಬೆಂದೊಡಲ ಹೊರೆಯ
ಹೋಯಿತ್ತೆನ್ನ ಸಂಸಾರ! ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ
ಹೇಯವಿಲ್ಲಾ; ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲಾ!
ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ
ಕೊಂದುದಯ್ಯಾ ಈ ಮಾಯೆ ಕೂಡಲಸಂಗಮದೇವಾ.
__________________________________

48. ದಿಟ ಪುಟ ಭಕುತಿ ಸಂಪುಟ ನೆಲೆಗೊಳ್ಳದಾಗಿ
ಟಿಂಬಕನನಾಡಿಸುತ್ತಿದ್ದಿತಯ್ಯಾ ನಿನ್ನ ಮಾಯೆ;
ಟೀಕವ ಟಿಂಬಕನಾಡಿಸುತ್ತಿದ್ದಿತಯ್ಯಾ ನಿನ್ನ ಮಾಯೆ;
ಕೂಡಲಸಂಗಮದೇವಯ್ಯಾ, ಹೊನ್ನ ಹೆಣ್ಣ ಮಣ್ಣ ತೋರಿ.
__________________________________

49. ಪಾತಕ ಶತಕೋಟಿಯನೊರಸಲು ಸಾಲದೆ ಒಂದು ಶಿವನ ನಾಮ ?
ಸಾಲದೆ ಒಂದು ಹರನ ನಾಮ ?
ಕೂಡಲ ಸಂಗಮದೇವಾ, ನಿಮ್ಮ ಉಂಡಿಗೆಯ ಪಶುವ ಮಾಡಿಧೆಯಾಗಿ.
__________________________________

50. ಲಿಂಗದ ಉಂಡಿಗೆಯ ಪಶುವಾನನಯ್ಯ ವೇಶ್ಹಧಾರಿಯಾನು,
ಉದರ ಪೋಶ್ಹಕನಾನಯ್ಯ.
ಕೂಡಲ ಸಂಗನ ಶರಣರ ಧರ್ಮದ ಕವಿಲೆಯಾನು.


ಮುಂದುವರೆಯುವುದು..



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...