ಹೊಗಳು ಭಟ್ಟರ ಸಂತೆ
ಇದು ಲೋಕವಂತೆ
ಎಲ್ಲೆಲ್ಲಿಯೂ ಇವರೇ
ಕಂತೆ ಕಂತೆ!
ಆದರ್ಶ, ಗೀದರ್ಶ
ಬರಿ ಬಣಗು ಕಂತೆ
ಪುಸ್ತಕದ ಬದನೇಕಾಯ್
ತಿನುವುದಕೆ ಬಂತೇ?
ಬಾ ಹರಟು ಒಣ ಹರಟೆ
ಸಿಗರೇಟು ಹಚ್ಚು
ಅವಳಂತೂ, ಇವಳಿಂತು
ಇದೆ ನನಗೆ ಮೆಚ್ಚು
ರಸಿಕತನ ಬೇಕಯ್ಯ..
ಏನಿದ್ದರೇನು?
ಬಂಡಿಗಟ್ಟಲೆ ಓದಿ
ನೀ ಪದೆದುದೇನು?
ನೀ ಇಂದ್ರ ನೀ ಚಂದ್ರ
ಕಲಿಕರ್ಣ ಪಿಂಡ!
(ನಾನೂ ಅವರೊಳಗೊಬ್ಬ)
ಬಹದ್ದೂರ ಗಂಡ!
ಹೊಗಳಿ ಹೊಗಳಿಸಿಕೊಳುವ
ಚಿಂತೆಯೇ ಚಿಂತೆ
ಒಂಟೆ ಮದುವೆಗೆ ಕತ್ತೆ
ಪದ ಹೇಳಿದಂತೆ.
- ಜಿ. ಎಸ್. ಶಿವರುದ್ರಪ್ಪ
('ದೇವಶಿಲ್ಪ' ಕವನ ಸಂಕಲನದಿಂದ)
No comments:
Post a Comment