ಶಿವಮಂದಿರಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕೆ ಬಾ..
ಬಾ ಫಾಲ್ಗುಣ ರವಿ ದರ್ಶನಕೆ
ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು
ಕೋಟಿವಿಹಂಗಮ ಮಂಗಲರವ ರಸನೈವೇದ್ಯಕೆ ಮುದ ತಾಳುವನು
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು..
ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀಸಮಹಿಮ ಬಾನ್‌ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡಲಲಿ ಇದೆಕೋ ಸ್ಪಂದಿಸುತಿದೆ ಭಾವಜ್ವಾಲೆ..
ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯ ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ
ಸರ್ವೇಂದ್ರಿಯ ಸುಖನಿಧಿ ಅಲ್ಲಿ; ಸರ್ವಾತ್ಮನ ಸನ್ನಿಧಿ ಅಲ್ಲಿ
ಸಕಲಾರಾಧನ ಸಾಧನಬೋಧನದನುಭವರಸ ತಾನಹುದಲ್ಲಿ.
- ಕುವೆಂಪು
('ಪಕ್ಷಿಕಾಶಿ' ಕವನ ಸಂಕಲನದಿಂದ)
No comments:
Post a Comment