ನೋಡವ್ವ ತಂಗಿ.. ಕೋಡಗನ್ನ ಕೋಳಿ ನುಂಗಿತ್ತ
ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ್ತ
ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ್ತ
ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ್ತ
ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ್ತ
ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ್ತ
ಕೋಡಗನ್ನ ಕೋಳಿ ನುಂಗಿತ್ತ..
- ಸಂತ ಶಿಶುನಾಳ ಶರೀಫ
____________________________________________
- ಇಲ್ಲಿ ಶರಿಫರು ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಕೋಳಿಗೆ ಹೋಲಿಸಿ ಹಾಡಿದ್ದಾರೆ (ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ. ಕೋಳಿಯ ಕೂಗು ಬೆಳಗಿನ ಸೂಚನೆ. ಇದು ಆಧ್ಯಾತ್ಮಿಕ ಬೆಳಗನ್ನು ಸೂಚಿಸುವ ಕೋಳಿ. ಆಧ್ಯಾತ್ಮಿಕ ಜ್ಞಾನೋದಯವು ಕೋಡಗದಂತಿರುವ ಮನಸ್ಸನ್ನು ನುಂಗಿ ಹಾಕುತ್ತದೆ ಎಂದು ಶರೀಫರು ಹೇಳುತ್ತಾರೆ).
- ಆಡು ಅಂದರೆ ಜ್ಞಾನ. ಇದು ಸಣ್ಣದು . ಸಂಸಾರದ ಆಸೆಗಳಿಗೋ ಆನೆಯ ಬಲ.
- ಗೋಡೆ ಎಂದರೆ ಮನಸ್ಸಿನ ಭಿತ್ತಿ. ಜ್ಞಾನೋದಯದ ನಂತರ, ಈ ಗೋಡೆಯ ಮೇಲೆ, ಎಷ್ಟೇ ಸುಣ್ಣ ಹಚ್ಚಲಿ, ಯಾವುದೇ ಬಣ್ಣ ಹಚ್ಚಲಿ, ಅದನ್ನು ಗೋಡೆಯೇ ತಿಂದು ಹಾಕಿ ಬಿಡುತ್ತದೆ, ಶುಭ್ರವಾಗಿಯೇ ಉಳಿಯುತ್ತದೆ.
- ಪಾತರದವಳು (ಕುಣಿಯಲು ಬಂದ ನರ್ತಕಿ) ಎಂದರೆ ಸಂಸಾರದಲ್ಲಿ ಆಡಲು ಬಂದ ಜೀವಾತ್ಮ. ಮದ್ದಲೆ ಅಂದರೆ ಪರಮಾತ್ಮ ಬಾರಿಸುತ್ತಿರುವ ಜ್ಞಾನದ ಮದ್ದಲೆ.
- ಒಳ್ಳು ಹಾಗೂ ಬೀಸುವ ಕಲ್ಲುಗಳನ್ನು ಶರೀಫರು ಸಂಸಾರಕ್ಕೂ, ಒನಕೆ ಹಾಗೂ ಬೀಸುವ ಕಲ್ಲಿನ ಗೂಟವನ್ನು ಸಾಧಕನ ಕರ್ಮಗಳಿಗೂ ಹೋಲಿಸಿದ್ದಾರೆ. ಕುಟ್ಟಲಿಕೆ ಬಂದ ಮುದುಕಿ ಅಂದರೆ ಈ ಸಂಸಾರದಲ್ಲಿ ಬಂದು, ಕರ್ಮಗಳಿಂದ ಪಕ್ವವಾದ ಜೀವಾತ್ಮ. ಇಂತಹ ಜೀವಾತ್ಮನನ್ನು ನೊಣದಷ್ಟು ಸಣ್ಣಗಿನ ಜ್ಞಾನ ತಿಂದು ಹಾಕುತ್ತದೆ.
- ಮಗ್ಗವೆಂದರೆ ಸಂಸಾರ. ಮಗ್ಗವನ್ನು ಕಟ್ಟಿರುವ ಹಗ್ಗವೆಂದರೆ ಸಂಸಾರಕ್ಕೆ ಜೋತು ಬೀಳುವ ಮನಸ್ಸು. ಸಂಸಾರವೆನ್ನುವ ಮಗ್ಗದಲ್ಲಿ ನೇಯಲು ಕುಳಿತ ಅಣ್ಣನನ್ನು ಅಂದರೆ ಜೀವಾತ್ಮನನ್ನು ಮಗ್ಗದ ಕೆಳಗಿರುವ ಕುಣಿ ನುಂಗಿ ಹಾಕುತ್ತದೆ.. ಅಂದರೆ ಆತನಿಗೆ ಜ್ಞಾನೋದಯವಾಗುತ್ತದೆ !
- ಸಂಸಾರವೆಂಬ ಹೊಲವನ್ನು ಊಳಲು ಬಂದ ಎತ್ತು.. ತನ್ನನ್ನು ನೊಗಕ್ಕೆ ಅಂದರೆ ಕರ್ಮಗಳಿಗೆ ಬಂಧಿಸಿದ ಜತ್ತಗಿ ಅಂದರೆ ಕರ್ಮಪಾಶವನ್ನೆ ತಿಂದು ಹಾಕಿದೆ (ಸಾಧನೆಯ ಸಹಾಯದಿಂದ).
- ಬಾನ ಅಂದರೆ ದೇವರೆದುರಿಗೆ ಇಟ್ಟ ಎಡಿ, ನೈವೇದ್ಯ. ಹೊಲದಲ್ಲಿ ದೇವರ ಎದುರಿಗೆ ಇಡಲಾದ ಈ ನೈವೇದ್ಯದ ಅನ್ನವನ್ನು ಬತ್ತವೇ ತಿಂದು ಹಾಕಿದೆ (ಈ ಸಾಧಕನ ಕರ್ಮಪಾಕಗಳು ಶಿಥಿಲವಾಗುತ್ತಿವೆ). ಈ ಸಾಧಕನು ಮುಕ್ಕಟೆಯಾಗಿ (ಬೇಗ ಬೇಗನೇ), ಹೊಲವನ್ನು ಊಳುತ್ತಿದ್ದಾನೆ. ಅವನನ್ನು ಮೇಳಿ ನುಂಗಿ ಹಾಕಿದೆ. ಮೇಳಿ ಅಂದರೆ (ಒಕ್ಕಲುತನದ ಸಾಧನವಿರಬಹುದು)..
- ಗುಡ್ಡ ಎಂದರೆ ಅನಾದಿ-ಅನಂತನಾದ ಚಿತ್ ಸ್ವರೂಪನಾದ ಪರಮಾತ್ಮ. ಪರಮಾತ್ಮನು ಗುಡ್ಡದಲ್ಲಿಯೆ ಇರುವ ಗಂವ್ಹರವನ್ನು (ಗವಿಯನ್ನು) ಅಂದರೆ ಅನಾದಿ-ಅನಂತವಾದ ಸಂಸಾರವನ್ನು ನುಂಗಿದ್ದಾನೆ.
- ಈ ಸಂಸಾರವು ತನ್ನಲ್ಲಿರುವ ಇರಿವೆಯನ್ನು (ಅಸ್ತಿತ್ವವನ್ನು) ನುಂಗಿ ಹಾಕಿದೆ.
No comments:
Post a Comment