Wednesday, November 8, 2017

ಎಲ್ಲರಂಥವನಲ್ಲ ನನ್ನ ಗಂಡ..


“ಎಲ್ಲರಂಥವನಲ್ಲ ನನ ಗಂಡ” ಎನ್ನುವ ಹಾಡಿನಲ್ಲಿ ಶರೀಫರು ಪರಮಾತ್ಮನನ್ನು ಪತಿಗೆ ಹಾಗೂ ಜೀವಾತ್ಮರಾದ ತಮ್ಮನ್ನು ಸತಿಗೆ ಹೋಲಿಸಿಕೊಂಡು ಹಾಡಿದ್ದಾರೆ. 
  • ಈತ ಬಲ್ಲಿದನಾದ ಗಂಡ ಎಂದು ಇವನ ಹೆಂಡತಿಗೆ ಅಭಿಮಾನವಿದೆ. 
  • ತನ್ನ ಹೆಂಡತಿಯನ್ನು ತನಗೆ ಬೇಕಾದಂತೆ ತಿದ್ದುವದರಲ್ಲಿ ಈತ ಬಲ್ಲಿದ, ಅಂದರೆ ಜಾಣ! 
  • ಅಷ್ಟೇ ಅಲ್ಲ. ಅವಳನ್ನು ಪರಿವರ್ತಿಸುವ ಈ ಕಾರ್ಯವನ್ನು ಆತ ‘ಪುಂಡ’ತನದಿಂದ, aggressively ಮಾಡುತ್ತಾನೆ. 
  • ಹೆಂಡತಿಗೆ ಈ ವಿಷಯದಲ್ಲಿ ಸ್ವಲ್ಪವೂ ಸ್ವಾತಂತ್ರ್ಯ ಎನ್ನುವದಿಲ್ಲ. ಆದರೆ ಅವಳಿಗೆ ಅಸಮಾಧಾನವೂ ಇಲ್ಲ. 
              ಇದರಲ್ಲಿ ತನ್ನ ಹಿತವೇ ಇದೆ ಎಂದು ಅರಿತ ಅವಳು ಗಂಡನ ಇಂತಹ ವರ್ತನೆಯನ್ನು ಮೆಚ್ಚಿಕೊಂಡಿದ್ದಾಳೆ. 
_________________________________________________

ಎಲ್ಲರಂಥವನಲ್ಲ ನನ್ನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ಕೇಳೆ
ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲೂ ಹೋಗದ ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ
ಎಲ್ಲರಂಥವನಲ್ಲ ನನ್ನ ಗಂಡ

ತುಂಟ ಸವತಿಯ ಸೊಂಟಮುರಿ ಹೊಡೆದಾ
ಒಣ ಪಂಟಮಾತಿನ
ಗಂಟುಗಳ್ಳರ ಮನೆಗೆ ಬರಗೊಡದಾ
ಕುಂಟಕುರುಡಾರೆಂಟು ಮಂದಿ
ಗಂಟುಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೇ ಸಿಕ್ಕಾ
ಎಲ್ಲರಂಥವನಲ್ಲ ನನ್ನ ಗಂಡ

ಎಲ್ಲರಂಥವನಲ್ಲ ನನ್ನ ಗಂಡ

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತಲ್ಲಿ ಮೂವರ
ಮಕ್ಕಳೈವರ ಮಮತೆ ಕೆಡಿಸಿದನೇ
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲ್ಲಿ ಇಟ್ಟು ನನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೆ
ಎಲ್ಲರಂಥವನಲ್ಲ ನನ್ನ ಗಂಡ

ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಕೆ ಒಯ್ದು
ಭ್ರಾಂತಿ ಭವ ದುರಿತವನು ಹರಿಸಿದನೇ
ಶಿಶುನಾಳ ಧೀಶ

ಎಲ್ಲರಂಥವನಲ್ಲ ನನ್ನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ.. 

- ಸಂತ ಶಿಶುನಾಳ ಶರೀಫ



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...