ದಿನರಾತ್ರಿ ಅನ್ನದೆ ಹೊಳೆವ ರಟ್ಟೆಗಳಲ್ಲಿ
ದೋಣಿ ಹೊತ್ತುಕೊಂಡು ನಡೆದಿದ್ದಾರೆ. ಪ್ರತಿ ಘಟ್ಟ
ಏರಿದಾಗಲೂ ಕಂಡೀತು ಎಂದು ದೆಸೆಗೆಟ್ಟು
ಮತ್ತೆ ಇಳಿದಿದ್ದಾರೆ ಕಂದಕ ಬೆಳಕಿನ ಧೂಳಿಯಲ್ಲಿ
ವಿಶ್ವದ ಉಡದಾರವೊಂದು ಸಣ್ಣ ನೂಲಿನಂತೆ
ಕಿಸೆಯಲ್ಲಿದೆ. ಅದರಲ್ಲಿ ಬಿಸ್ಕತ್ತು ಚಂದಿರನ ತೂರಿಸಿ
ರಿವ್ವ ರಿವ್ವ ಬೆರಳುಗಳ ನಡುವೆ ತಿರುಗಿಸಿ
ಮನದಲ್ಲೆ ತಿನ್ನುವರು. ಕುಡಿಯುವರು ಗಾಳಿ.
ಇದೆಲ್ಲ ಮುಗಿಯುವಲ್ಲಿ ಹೋಗಿ ನಿಂತು ಅದರಾಚೆಯ
ಆ ಸಮುದ್ರದಲ್ಲಿ ಇಳಿಬಿಡುವರಂತೆ ದೋಣಿ
ಅದರಲ್ಲಿಟ್ಟು ಹಣ್ಣು ಕುಲಾವಿ ಕೋವಿ. ಉಕ್ಕುವ
ಸಮುದ್ರದ ಬಣ್ಣ ಯಾವ ಕಣ್ಣಿನಂತಿದೆಯೋ
ಮಾತಿಲ್ಲದೆ ಹೊರಟು ನಿಂತವರು ಅವರು. ಇಲ್ಲಿ
ಕಾದಿವೆ ಕೆಂಡ ಒಲೆಗಳಲ್ಲಿ. ಮೀನಿಗಾಗಿ ಬಯಕೆ
ಪಟ್ಟಿದ್ದಾಳೆ ಹೆರಿಗೆಗೆ ಬಂದ ಬೇಬಿ. ರೇಡಿಯೋ
ಡಿಪ್ಲೋಮಾ ಮಾಡುವೆನೆಂದು ಊಟ ಬಿಟ್ಟಿದ್ದಾನೆ ತಮ್ಮ
ಪಟ್ಟಣಗಳ ಬಿಟ್ಟೇ ಹರಿದಿವೆ ನದಿ ಅರಣ್ಯಗಳ
ಕಾಲು ತೊಳೆದು. ಸೊಂಟಮಟ ನೀರು ದಾಟಿ ಪಾರಾಗಿದ್ದಾರೆ
ಪ್ರೇಮಿಗಳು. ಸಮುದ್ರವೊಂದು ಕರೆದಂತೆ ಆಗಸದಲ್ಲಿ ಅಮ್ಮ
ರಾತ್ರಿ ಎದ್ದು ಕೂತಿದ್ದಾಳೆ ದೇವರೇ ದಡ ಬಿಡಲಿ ದೋಣಿ
ಬಿಟ್ಟು ಹೋಗಿರುವ ಉಡುಪುಗಳಲ್ಲಿ ಕಾದಿವೆ ನೆರಳು
ಚಾದರು ಚಾಪೆಗಳಲ್ಲಿ ನಿದ್ರೆ ಗಾಳಿಯಲ್ಲಿ ಬೆವರು
ಸಿಕ್ಕೆತೆ ಸಿಕ್ಕಿತೇ ಸಮುದ್ರ ಅವರಿಗೆ ಸಿಕ್ಕ ಚಣ ಒಂಟಿ
ಕರೆಯಲ್ಲಿ ಅತ್ತು ಬಿಡುವರೇ ಅವರು ಮಕ್ಕಳಂತೆ
No comments:
Post a Comment