11. ಮಾರಿಕವ್ವೆಯ ನೋಂತು ಕೊರಳಲ್ಲಿ ಕಟ್ಟಿಕೊಂಬರು.
ಸಾಲಬಟ್ಟರೆ ಮಾರಿಕೊಂಬರಯ್ಯ!
ಸಾಲಬಟ್ಟರೆ ಅವನೊತ್ತೆಯನಿಟ್ಟು ಕೊಂಡುಂಬರಯ್ಯ!
ಮಾರುವೋಗನೊತ್ತೆವೋಗ
ನಮ್ಮ ಕೂಡಲಸಂಗಮದೇವ..
__________________________________
12. ಅರಗು ತಿಂದರೆ ಕರಗುವ ದೈವವ,
ಉರಿಯ ಕಂಡರೆ ಮುರುಟುವ ದೈವವ,
ಎಂತು ಸರಿಯೆಂಬೆನಯ್ಯ!
ಅವಸರ ಬಂದರೆ ಮಾರುವ
ದೈವವನೆಂತು ಸರಿಯೆಂಬೆನಯ್ಯ!
ಅಂಜಿಕೆಯಾದರೆ ಹೂಳುವ
ದೈವವನೆಂತು ಸರಿಯೆಂಬೆನಯ್ಯ!
ಸಹಜಭಾವ ನಿಜೈಕ್ಯ
ಕೂಡಲಸಂಗಮದೇವನೊಬ್ಬನೇ ದೇವ..
13. ಹಾಳುಮೊರಡಿಗಳಲ್ಲಿ, ಊರ ದಾರಿಗಳಲ್ಲಿ;
ಕೆರೆ-ಭಾವಿ-ಹೂಗಿಡಂ-ಮರಂಗಳಲ್ಲಿ,
ಗ್ರಾಮಮಧ್ಯಂಗಳಲ್ಲಿ,
ಚೌಪಥ-ಪಟ್ಟಣ ಪ್ರವೇಶದಲ್ಲಿ, ಹಿರಿಯಾಲದ ಮರದಲ್ಲಿ
ಮನೆಯ ಮಾಡಿ,
ಕರೆವೆಮ್ಮೆ, ಹಸುಗೂಸು, ಬಸುರಿ, ಬಾಣತಿ, ಕುಮಾರಿ
ಕೊಡುಗೂಸೆಂಬರ ಹಿಡಿದುಂಬ, ತಿರಿದುಂಬ
ಮಾರಯ್ಯ, ಬೀರಯ್ಯ,
ಖೇಚರ ಗಾವಿಲ, ಅಂತರಬೆಂತರ,
ಕಾಳಯ್ಯ, ಮಾರಯ್ಯ, ಮಾಳಯ್ಯ, ಕೇತಯ್ಯಗಳೆಂಬ
ನೂರು ಮಡಕೆಗೆ ನಮ್ಮ ಕೂಡಲಸಂಗಮದೇವ
ಶರಣೆಂಬುದೊಂದು ದಡಿ ಸಾಲದೆ ?
__________________________________
ಕೆರೆ-ಭಾವಿ-ಹೂಗಿಡಂ-ಮರಂಗಳಲ್ಲಿ,
ಗ್ರಾಮಮಧ್ಯಂಗಳಲ್ಲಿ,
ಚೌಪಥ-ಪಟ್ಟಣ ಪ್ರವೇಶದಲ್ಲಿ, ಹಿರಿಯಾಲದ ಮರದಲ್ಲಿ
ಮನೆಯ ಮಾಡಿ,
ಕರೆವೆಮ್ಮೆ, ಹಸುಗೂಸು, ಬಸುರಿ, ಬಾಣತಿ, ಕುಮಾರಿ
ಕೊಡುಗೂಸೆಂಬರ ಹಿಡಿದುಂಬ, ತಿರಿದುಂಬ
ಮಾರಯ್ಯ, ಬೀರಯ್ಯ,
ಖೇಚರ ಗಾವಿಲ, ಅಂತರಬೆಂತರ,
ಕಾಳಯ್ಯ, ಮಾರಯ್ಯ, ಮಾಳಯ್ಯ, ಕೇತಯ್ಯಗಳೆಂಬ
ನೂರು ಮಡಕೆಗೆ ನಮ್ಮ ಕೂಡಲಸಂಗಮದೇವ
ಶರಣೆಂಬುದೊಂದು ದಡಿ ಸಾಲದೆ ?
__________________________________
14. ಆಗಳೂ ಲೋಗರ ಮನೆಯ ಬಾಗಿಲ
ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು,
ಹೋಗೆಂದರೆ ಹೋಗವು,
ನಾಯಿಂದ ಕರಕಷ್ಟ ಕೆಲವು ದೈವಂಗಳು!
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವ..
__________________________________
15. ಬಿದಿರೆಲೆಯ ಮೆಲಿದಂತಲ್ಲದೆ,
ರಸ ಪಡೆಯಲು ಬಾರದು.
ನೀರ ಕಡೆದರೆ, ಕಡೆದಂತಲ್ಲದೆ,
ಬೆಣ್ಣೆಯ ಪಡೆಯಲು ಬಾರದು.
ಮಳಲ ಹೊಸೆದರೆ, ಹೊಸೆದಂತಲ್ಲದೆ,
ಸರವಿಯ ಪಡೆಯಲು ಬಾರದು.
ನಮ್ಮ ಕೂಡಲಸಂಗಮದೇವನಲ್ಲದೆ
ಅನ್ಯ ದೈವಕ್ಕೆರಗಿದರೆ,
ಪೊಳ್ಳ ಕುಟ್ಟಿ ಕೈ ಪೋಟು ಹೋದಂತಾಯಿತ್ತಯ್ಯ!
__________________________________
16. ಇಬ್ಬರು ಮೂವರು ದೇವರೆಂದು
ಉಬ್ಬಿ ಮಾತನಾಡಬೇಡ.
ದೇವನೊಬ್ಬನೇ ಕಾಣಿರೋ.
ಇಬ್ಬರೆಂಬುದು ಹುಸಿ ನೋಡಾ.
ಕೂಡಲಸಂಗಮನಲ್ಲದಿಲ್ಲೆಂದಿತ್ತು ವೇದ..
__________________________________
17. ಅದುರಿತು ಪಾದಘಾತದಿಂದ ಧರೆ!
ಬಿದಿರಿದವು ಮಕುಟ ತಾಗಿ ತಾರಕಿಗಳು
ಉದುರಿದವು ಕೈತಾಗಿ ಲೋಕಂಗಳೆಲ್ಲ!
"ಮಹೀ ಪಾದಾಘಾತಾದ್ವ್ರಜತಿ ಸಹಸಾ ಸಂಶಯಪದಂ
ಪದಂ ವಿಷ್ಣೋರ್ಭ್ರಾಮ್ಯದ್ಭುಜಪರಿಘರುಗ್ಣಗ್ರಹಗಣಂ!
ಮುಹರ್ದ್ಯೌರ್ಧ್ವಸ್ತಾತ್ಯಂತ್ಯನಿಭೃತಜಟಾತಾಟಿತತಟಾ
ಜಗದ್ರಕ್ಷಾಯೈ ತ್ವಂ ನನು ವಹಸಿ ಭೌಮಾಂ ಚ ವಿಭುತಾಂ"
ನಮ್ಮ ಕೂಡಲಸಂಗಮದೇವ
ನಿಂದು ನಾಂಟ್ಯವನಾಡೆ!
__________________________________
18. ಹರನ ಕೊರಳಲ್ಲಿಪ್ಪ ಕರೋಟಿಮಾಲೆಯ
ಶಿರದ ಲಿಖಿತವ ಕಂಡು, ಮರುಳುತಂಡಗಳು
ಓದಿನೋಡಿ
"ಇವನಜ, ಇವ ಹರಿ, ಇವ ಸುರಪತಿ
ಇವ ಧರಣೀಂದ್ರ, ಇವನಂತಕ"ನೆಂದು
ಹರುಷದಿಂದ ಸರಸವಾಡುವುದ ಹರ ನೋಡಿ
ಮುಗುಳುನಗೆಯ ನಗುತ್ತಿದ್ದನು!
ಕೂಡಲಸಂಗಮದೇವ..
__________________________________
19. ಎತ್ತೆತ್ತ ನೋಡಿದಡತ್ತತ್ತ ನೀನೇ ದೇವ!
ಸಕಲ ವಿಸ್ತಾರದ ರೂಹು ನೀನೇ ದೇವ.
ವಿಶ್ವತಶ್ಚಕ್ಷು ನೀನೇ ದೇವ,
ವಿಶ್ವತೋಮುಖ ನೀನೇ ದೇವ.
ವಿಶ್ವತೋಬಾಹು ನೀನೇ ದೇವ.
ವಿಶ್ವತೋಪಾದ ನೀನೇ ದೇವ.
ಕೂಡಲಸಂಗಮದೇವ..
__________________________________
20. ಸಕಲ-ನಿಷ್ಕಲವ ಕೂಡಿಕೊಂಡಿಪ್ಪೆಯಾಗಿ
ಸಕಲ ನೀನೆ, ನಿಷ್ಕಲ ನೀನೇ ಕಂಡಯ್ಯ!
ವಿಶ್ವತಶ್ಚಕ್ಷು ನೀನೇ ದೇವ!
ವಿಶ್ವತೋಬಾಹು ನೀನೇ ದೇವ
ವಿಶ್ವತೋಮುಖ ನೀನೇ ದೇವ!
ಕೂಡಲಸಂಗಮದೇವ..
ಮುಂದುವರೆದಿದೆ..
No comments:
Post a Comment