Wednesday, November 8, 2017

ಬಸವಣ್ಣ ನವರ ವಚನಗಳು.. (21 to 30)



21. ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು.
ನಿಮಗೆರಗದ ಕಾರಣ ಕೊರಳಲ್ಲಿ ನೇಣು.
ಹಿಂಡಲೇಕೋ, ತೊಳೆಯಲೇಕೊ ?
ಮುಳುಮುಳುಗಿ ಮೂಗ ಹಿಡಿಯಲೇಕೋ ?
ಕೂಡಲಸಂಗನ ಶರಣರಲ್ಲಿ
ಡೋಹರಕಕ್ಕಯ್ಯನಾವ ತೊರೆಯಲ್ಲಿ ಮಿಂದ ?
__________________________________

22. ಕಣ್ಣಮುಚ್ಚಿ ಕನ್ನಡಿಯ ತೋರುವಂತೆ!
ಇರುಳು ಹಗಲಿನ ನಿದ್ರೆ ಸಾಲದೆ ?
ಬೆರಳನೆಣಿಸಿ ಪರಮಾರ್ಥವ ಹಡೆವುದು
ಚೋದ್ಯವಲ್ಲವೆ ಹೇಳಾ ?
ಮೂಗ ಮುಚ್ಚಿ ಮುಕ್ತಿಯ ಬಯಸುವ
ನಾಚಿಕೆಯಿಲ್ಲದವರ ನಾನೇನೆಂಬೆ ಕೂಡಲಸಂಗಮದೇವ..
__________________________________

23. ನೀರ ಕಂಡಲ್ಲಿ ಮುಳುಗುವರಯ್ಯ!
ಮರನ ಕಂಡಲ್ಲಿ ಸುತ್ತುವರಯ್ಯ!
ಬತ್ತುವ ಜಲವನೊಣಗುವ ಮರನ
ಮೆಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವ..
__________________________________

24. ಇಟ್ಟಯ ಹಣ್ಣ ನರಿ ತಿಂದು
ಸೃಷ್ಟಿ ತಿರುಗಿತೆಂಬಂತೆ,
ಮಟ್ಟಿಯನಿಟ್ಟ ದ್ವಿಜರ ಮಾತದೇಕೆ ?
ಹಗಲುಗಾಣದ ಗೂಗೆ ಇರುಳಾಯಿತ್ತೆಂದರೆ
ಜಗಕ್ಕೆ ಯಿರುಳಪ್ಪುದೆ ಮರುಳೆ ?
ಹೋಮದ ನೆವದಿಂದ ಹೋತನ ಕೊಂದು ತಿಂಬ
ಅನಾಮಿಕರೊಡನಾಡಿ ಗೆಲುವುದೇನು
ಕೂಡಲಸಂಗಮದೇವ..
__________________________________

25. ಹೊಲೆಯೊಳಗೆ ಹುಟ್ಟಿ ಕುಲವನರಸುವೆಯೆಲವೋ
ಮಾತಂಗಿಯ ಮಗ ನೀನು!
ಸತ್ತುದನೆಳೆವವನೆತ್ತಣ ಹೊಲೆಯ ?
ಹೊತ್ತು ತಂದು ನೀವು ಕೊಲುವಿರಿ!
ಶಾಸ್ತ್ರವೆಂಬುದು ಹೋತಿಂಗೆ ಮಾರಿ.
ವೇದವೆಂಬುದು ನಿಮಗೆ ತಿಳಿಯದು.
ನಮ್ಮ ಕೂಡಲಸಂಗನ ಶರಣರು
ಕರ್ಮವಿರಹಿತರು, ಶರಣಾಸನ್ನಹಿತರು,
ಅನುಪಮ ಚರಿತ್ರರು,
ಅವರಿಗೆ ತೋರಲು ಪ್ರತಿಯಿಲ್ಲವೋ..
__________________________________

26. ಮಾತಿನ ಮಾತಿಂಗೆ ನಿನ್ನ ಕೊಂದೆಹರೆಂದು
ಅಳು ಕಂಡಾ! ಎಲೆ ಹೋತೇ,
ವೇದವನೋದಿದವರ ಮುಂದೆ
ಅಳು, ಕಂಡಾ! ಎಲೆ ಹೋತೇ,
ಶಾಸ್ತ್ರವನೋದಿದವರ ಮುಂದೆ
ಅಳು, ಕಂಡಾ! ಎಲೆ ಹೋತೇ,
ನೀನತ್ತುದಕೆ ತಕ್ಕುದ ಮಾಡುವ ಕೂಡಲಸಂಗಮದೇವ.. 
__________________________________

27. ಗುಡಿಯೊಳಗಿದ್ದು ಗುಡಿಯ ನೇಣ ಕೊಯ್ದರೆ
ಗುಡಿಯ ದಡಿ ಬಿದ್ದು ಹಲ್ಲು ಹೋಹುದು ನೋಡಾ!
ಪೊಡವಿಗೀಶ್ವರನ ಗರ್ಭವಾಸದೊಳಗಿದ್ದು
ನುಡಿವರು ಮತ್ತೊಂದು ದೈವ ಉಂಟೆಂದು!
ತುಡುಗುಣಿ ನಾಯ ಹಿಡಿತಂದು ಸಾಕಿದರೆ
ತನ್ನೊಡಯಂಗೆ ಬೊಗಳುವಂತೆ ಕಾಣಾ
ಕೂಡಲಸಂಗಮದೇವ..
__________________________________

28. ಋಣ ತಪ್ಪಿದ ಹೆಂಡಿರಲ್ಲಿ,
ಗುಣ ತಪ್ಪಿದ ನಂಟರಲ್ಲಿ,
ಜೀವವಿಲ್ಲದ ದೇಹದಲ್ಲಿ ಫಲವೇನೋ ?
ಆಳ್ದನೊಲ್ಲದಾಳಿನಲ್ಲಿ,
ಸಿರಿತೊಲಗಿದರಸಿನಲ್ಲಿ
ವರವಿಲ್ಲದ ದೈವದಲ್ಲಿ ಫಲವೇನೋ ?
ಕಳಿದ ಹೂವಿನಲ್ಲಿ ಕಂಪನು,
ಉಳಿದ ಸೊಳೆಯಲ್ಲಿ ಪೆಂಪನು,
ಕೊಳೆಚೆನೀರಿನಲ್ಲಿ ಗುಣ್ಪನರಸುವಿರಿ!
ಮರುಳೆ, ವರಗುರು ವಿಶ್ವಕ್ಕೆಲ್ಲ
ಗಿರಿಜಾಮನೋವಲ್ಲಭ ಪರಮ ಕಾರುಣಿಕ
ನಮ್ಮ ಕೂಡಲಸಂಗಮದೇವ..
__________________________________

29. ಮಡಕೆ ದೈವ, ಮೊರ ದೈವ,
ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲ ನಾರಿ ದೈವ--ಕಾಣಿರೊ!
ಕೊಳಗ ದೈವ, ಗಿಣ್ಣಿಲು ದೈವ--ಕಾಣಿರೊ!
ದೈವ ದೈವವೆಂದು ಕಾಲಿಡಲಿಂಬಿಲ್ಲ!
ದೇವನೊಬ್ಬನೆ ಕೂಡಲಸಂಗಮದೇವ..
__________________________________

30. ಮೊರನ ಗೋಟಿಗೆ ಬಪ್ಪ ಕಿರುಕುಳದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು.
ಕುರಿ ಸತ್ತು ಕಾವುದೆ ಹರ ಮುಳಿದವರ ?
ಕುರಿ ಬೇಡ, ಮರಿ ಬೇಡ
ಬರಿಯ ಪತ್ರೆಯ ತಂದು
ಮರೆಯದೇ ಪೂಜಿಸು ನಮ್ಮ ಕೂಡಲಸಂಗಮದೇವನ.. 

ಮುಂದುವರೆದಿದೆ.. 


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...