11. ಊರಿಂಗೆ ದಾರಿಯನು | ಆರು ತೋರಿದಡೇನು |
ಸಾರಾಯದ ನಿಜವ ತೋರುವ , ಗುರುವು ತಾ |
ನಾರಾದಡೇನು ಸರ್ವಜ್ಞ ||
ಅರ್ಥ: ತನಗೆ ಗೊತ್ತಿಲ್ಲದ ಊರಿನ ದಾರಿಯನ್ನು ಇಂಥವರೇ ತೋರಿಸಬೇಕೆಂಬ ನಿಯಮವಿರುವುದಿಲ್ಲ.ಅಂಥ ಸಮಯದಲ್ಲಿ ಯಾರು ದಾರಿ ತೋರಿಸಿದರೂ ಸರಿಯೇ, ಊರು ತಲುಪುತ್ತಾರೆ.ಅದರಂತೆ ಸತ್ಯದ ಅರಿವನ್ನು ತಿಳಿಸಿಕೊಡುವಂಥ ಗುರುವು ಎಂಥವನಿದ್ದರೇನು ?
__________________________________
12. ಬಂಧುಗಳು ಆದವರು | ಬಂದುಂಡು ಹೋಗುವರು |
ಬಂಧನವ ಕಳೆಯಲರಿಯರು , ಗುರುವಿಂದ |
ಬಂಧುಗಳು ಉಂಟೆ ಸರ್ವಜ್ಞ ||
ಅರ್ಥ: ಬಂಧು-ಬಳಗದವರೆಲ್ಲ ಬಂದು ಊಟಮಾಡಿ ಹೋಗುವುದಕ್ಕಷ್ಟೇ ಹೊರತು ಬಂಧನವನ್ನು ಕಳೆಯಲಾರರು;ಆದರೆ ಎಲ್ಲ ಬಂಧನಗಳನ್ನು ಹೊಡೆದೋಡಿಸುವಂಥ ಶಕ್ತಿಯುಳ್ಳ ಗುರುವಿಗಿಂತ ಹೆಚ್ಚಿನ ಬಂಧುಗಳು ಯಾರಿದ್ದಾರೆ ? (ಯಾರೂ ಇಲ್ಲ).
__________________________________
13. ತಂದೆಗೂ ಗುರುವಿಗೂ | ಒಂದು ಅಂತರವುಂಟು |
ತಂದೆ ತೋರುವನು ಸದ್ಗುರುವ, ಗುರುರಾಯ |
ಬಂಧನವ ಕಳೆವ ಸರ್ವಜ್ಞ ||
ಅರ್ಥ: ತಂದೆಗೂ ಮತ್ತು ಗುರುವಿಗೂ ಒಂದೇ ಒಂದು ಅಂತರವುಂಟು ಅದೆಂದರೆ ತಂದೆಯು ಒಳ್ಳೆಯ ಗುರುವನ್ನು ತೋರಿಸುತ್ತಾನೆ ಮತ್ತು ಗುರುವರ್ಯನು ಬಂಧನವನ್ನು ಕಳೆಯುತ್ತಾನ.
__________________________________
14. ಗುರು ಮನುಜನೆಂದವಗೆ | ಹರನ ಶಿಲೆಯೆಂದವಗೆ |
ಕರುಣ ಪ್ರಸಾದವನು , ಎಂಜಲೆಂದವಗೆ |
ನರಕ ತಪ್ಪುವದೇ ಸರ್ವಜ್ಞ ||
ಅರ್ಥ: ಗುರುವನ್ನು ಅವನೊಬ್ಬ ಮಾನವನು ಎನ್ನುವವನಿಗೆ , ದೇವದೇವನಾದ ಮಹದೇವನನ್ನು ಶಿಲೆ(ಕಲ್ಲಿನ ಮೂರ್ತಿ)ಎನ್ನುವವನಿಗೆ , ಪ್ರಸಾದವನ್ನು ಎಂಜಲು ಎಂದು ಹೀಯಾಳಿಸುವವನಿಗೆ ನರಕವು ಎಂದಿಗೂ ತಪ್ಪಲಾರದು.
__________________________________
15. ಎತ್ತಾಗಿ ತೊತ್ತಾಗಿ | ಹಿತ್ತಲದ ಗಿಡನಾಗಿ |
ಮತ್ತೆ ಪಾಪದ ಕೆರನಾಗಿ, ಗುರುವಿನ |
ಹತ್ತಲಿರು ಎಂದ ಸರ್ವಜ್ಞ ||
ಅರ್ಥ: ಯಾವಾಗಲೂ ಗುರುವಿನ ಬಳಿಯಲ್ಲಿಯೇ ಇರು.ಗುರುವನ್ನು ಬಿಟ್ಟು ಅಗಲಬೇಡ.ಗುರುವಿನ ಆಳಾಗಿ ಇಲ್ಲವೇ ಅವನ ಪಾದರಕ್ಷೆಯಾಗಿದ್ದರೂ ಅಡ್ಡಿಯಿಲ್ಲ;ಅವನ ಬಳಿಯೇ ಇರು.
__________________________________
16. ಮೊಸರು ಕಡೆಯಲು ಬೆಣ್ಣೆ | ಯೊಸೆದು ತೋರುವ ತೆರದಿ |
ಹಸನಪ್ಪ ಗುರುವಿನುಪದೇಶದಿಂ , ಮುಕ್ತಿ |
ವಶವಾಗದಿಹುದೆ ಸರ್ವಜ್ಞ ||
ಅರ್ಥ: ಮೊಸರು ಕಡೆದೊಡನೆ ಬೆಣ್ಣೆಯು ಚೆನ್ನಾಗಿ ಗೋಚರವಾಗುವಂತೆ,ಒಳ್ಳೆಯ ಗುರುವಿನ ಉಪದೇಶದಿಂದ ಮುಕ್ತಿಯು ದೊರೆಯದೆ ಇರಲಾರದು.
__________________________________
17. ಹಂದಿ ಚಂದನದ | ಸುಗಂಧವನು ಬಲ್ಲುದೆ |
ಒಂದನು ತಿಳಿಯಲರಿಯದ , ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ ||
ಅರ್ಥ: ಹಂದಿಯಂಥ ಕ್ಷುದ್ರಪ್ರಾಣಿಯು ಸುಗಂಧದ ಪರಿಮಳವನ್ನು ಅರಿಯಲಾರದು.ಅದರಂತೆಯೇ ಪರಬ್ರಹ್ಮನನ್ನು ಅರಿಯದಂಥ ಗುರುವು ಅಪಕೀರ್ತಿಗೊಳಗಾಗದೆ ಇರಲಾರನು.
__________________________________
18. ದಾನಭಕ್ತಿಗಳಲ್ಲಿ | 'ನಾನು' ಮರೆದಿರಬೇಕು |
ನಾನೆಂಬ ರೋಗ ನೀಗಿದಗೆ, ಗುರುಭೋದೆ ||
ತಾನೆ ಫಲಿಸುವದು ಸರ್ವಜ್ಞ ||
ಅರ್ಥ: ಭಕ್ತಿ , ದಾನ , ಧರ್ಮಗಳೇ ಮೊದಲಾದವುಗಳಲ್ಲಿ 'ನಾನು' ಎಂಬ ಅಹಂಕಾರವಿರಬಾರದು.(ನಾನು ಭಕ್ತಿವಂತ , ನಾನು ದಾನಿ ಎಂಬ ಗರ್ವವಿರಬಾರದು.)ಮನುಷ್ಯನು ತನ್ನಲ್ಲಿಯ 'ನಾನು'ಎಂಬ ಗರ್ವದ ರೋಗದಿಂದ ಪಾರಾದರೆ ಅವನಿಗೆ ಗುರುಬೋಧೆಯ ಫಲವು ತಾನಾಗಿಯೇ ದೊರೆಯುವುದು.
__________________________________
19. ಶ್ವಾನ ತೆಂಗಿನಕಾಯಿ | ತಾನು ಮೆಲಬಲ್ಲುದೆ |
ಹೀನಮನದವನಿಗುಪದೇಶವಿತ್ತಡದು |
ಹಾನಿ ಕಣಯ್ಯ ಸರ್ವಜ್ಞ ||
ಅರ್ಥ: ನಾಯಿಯು ತೆಂಗಿನಕಾಯಿಯನ್ನು ತಿನ್ನಬಲ್ಲುದೇ? ಎಂದಿಗೂ ಸಾಧ್ಯವಿಲ್ಲ.ಅದರಂತೆ ಹೀನ ಮನದ ಮನುಷ್ಯನಿಗೆ ಉಪದೇಶವಿತ್ತರೆ ಅದರಿಂದ ಹಾನಿಯೇ ಹೊರತು ಉಪಯೋಗವು ಎಳ್ಳಷ್ಟೂ ಇಲ್ಲ.
__________________________________
20. ಕಟ್ಟಿಗೆಗಳೆರಡನ್ನು | ಕಟ್ಟಿಟ್ಟರೇನಹುದು |
ಗಟ್ಟ್ಯಾಗಿ ಎರಡು ಮಥಿಸಲ್ಕೆ , ಬೇಗೆಯದು |
ಬೆಟ್ಟಕೊಂಡಂತೆ ಸರ್ವಗಮಜ್ಞ ||
ಅರ್ಥ: ಎರಡು ಕಟ್ಟಿಗೆಯ ತುಂಡುಗಳನ್ನು ಒಂದೆಡೆ ಸೇರಿಸಿ ಕಟ್ಟಿ ಇಟ್ಟರೆ ಅದರಿಂದ ಏನೂ ಆಗಲಾರದು.ಅವು ಒಂದು ಮೂಲೆಯಲ್ಲಿ ಬಿದ್ದುಕೊಂಡಿರುತ್ತವೆ ಅಷ್ಟೆ.ಆದರೆ ಅವೆರಡೂ ತುಂಡುಗಳನ್ನು ಒಂದಕ್ಕೊಂದು ಚೆನ್ನಾಗಿ ತಿಕ್ಕಿದರೆ ಅಗ್ನಿಯು ಉತ್ಪನ್ನವಾಗಿ ಬೆಟ್ಟವನ್ನೇ ಹಿಡಿದುಕೊಳ್ಳುತ್ತದೆ.
ಮುಂದುವರೆದಿದೆ..
No comments:
Post a Comment