Friday, May 25, 2018

'ಗಣೇಶಯ್ಯ'ನವರ "ಪದ್ಮಪಾಣಿ" ಪುಸ್ತಕ ಕುರಿತು ವಿಮರ್ಶೆ:


ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಸೌಮ್ಯ ಮಂಡ್ಯ' ಅವರ ಲೇಖನ..  

ಮನಸ್ಸಿನ ಮುಖಗಳೆಷ್ಟು ತಿಳಿದವರಾರು...? ಇತಿಹಾಸಕ್ಕೆ ಕಥೆಗಳೆಷ್ಟು ತಿಳಿದವರಾರು...? ಕೆದಕುತ್ತಾ ಹೋದರೆ ಪರಿಚಯವಾಗುತ್ತೆ ಒಂದೊಂದೇ ಮುಖ, ಆದರೆ ಅಂತ್ಯವಿಲ್ಲ. ಇತಿಹಾಸವೂ ಅಷ್ಟೇ.. ಕಲೆ ಹಾಕುತ್ತಾ ಹೋದಂತೆ ತೆರೆದುಕೊಳ್ಳುತ್ತೆ ಇತಿಹಾಸದೊಳಗಿನ ಇತಿಹಾಸಗಳ ರೋಚಕ ತಿರುವುಗಳು. ಬೆನ್ಹತ್ತಿ ಹೊರಟರೆ ಸಿಗುವುದು ನಂಬಲು ಸಾಧ್ಯವಿರದ ಅದ್ಭುತ ಚರಿತ್ರಗಳು, ವಿಸ್ಮಯಗಳು.

ಇಂತಹ ಕೆಲವು ವಿಸ್ಮಯಗಳನ್ನು ತೆರೆದಿಟ್ಟು, ಅದಕ್ಕೆ ಅತ್ಯಂತ ಸುಂದರ ಕಥಾ ರೂಪಕೊಟ್ಟು ಅದನ್ನು ಪುಸ್ತಕ ರೂಪವನ್ನಿಟ್ಟು ನಮಗೆ ನೀಡಿದ್ದಾರೆ ಡಾ|| ಕೆ ಎನ್ ಗಣೇಶಯ್ಯನವರು. "ಪದ್ಮಪಾಣಿ" ಕಥಾ ಸಂಕಲನವು ಹಲವು ಇತಿಹಾಸ ಪ್ರಸಿದ್ಧ ಚರಿತ್ರೆಯನ್ನು ತಿರುಳಿನ ಸಹಿತ ಬಿಡಿಸಿಡುವ ಒಂದು ಇತಿಹಾಸ ಸಂಶೋಧನಾ ಗ್ರಂಥ ಎಂದರೆ ತಪ್ಪಾಗಲಾರದು. ಓದುಗರ ಆಸಕ್ತಿ ಕುಂದದೆ ಕುತೂಹಲ ಹೆಚ್ಚಿಸುವ ಇವರ ಬರವಣಿಗೆ ಬಹಳ ಸೊಗಸಾಗಿದೆ. 


ಅಜಂತಾದ ಕೆತ್ತನೆಗಳಲ್ಲಿ ದ್ವಿಮುಖ ಪಾತ್ರವಿದ್ದು, ಸ್ತ್ರೀ ಮುಖಚರ್ಯೆಗೆ ರಾಣಿ ಕಮಲಾಂಬಿಕೆ, ಬೇಲೂರಿನಲ್ಲಿ ನಾಟ್ಯರಾಣಿ ಶಾಂತಲೆಯು ಕೆತ್ತನೆಗೆಂದು ತಾವೇ ಕಾರ್ಯ ನಿರ್ವಹಿಸಿರುವುದರ ಜೊತೆಗೆ ಸೌಂದರ್ಯ ದೇವತೆಯರಾದ ಇವರೇ ರೂಪದರ್ಶಿಗಳಾಗಿ ಎಂದೆಂದಿಗೂ ತಾವೇ ಸೌಂದರ್ಯ ರಾಣಿಯಾಗಿರುವುದು ಅಜರಾಮರ.

ಹೀಗೆ ನಮಗೆ ತಿಳಿದಿರುವ ಹಾಗೆ ಶ್ರೀರಂಗಪಟ್ಟಣದ ರಂಗರಾಯರ ಪತ್ನಿ ಅಲಮೇಲಮ್ಮನ ಮೂರು ಶಾಪಗಳು ಜಗಜನಿತ. ಆದರೆ ಅದು ಶಾಪವೇ ಅಲ್ಲ, ಮಾನವನ ಅಭಿವೃದ್ಧಿ ಕಾರ್ಯಗಳಿಂದಾದ ಹವಾಮಾನ ವೈಪರೀತ್ಯಗಳ ಪ್ರಭಾವ ಎಂಬುದರ ಪೂರ್ಣ ಮಾಹಿತಿಯು ಈ ಪುಸ್ತಕದಿಂದ ತಿಳಿಯುತ್ತದೆ.

ರಾಣಿ ಚೆನ್ನಮ್ಮನ ಆಳ್ವಿಕೆಗೂ ಮೊದಲು ಎಷ್ಟೋ ರಾಜರು ಆಳ್ವಿಕೆ ನಡೆಸಿದ್ದಾರೆ. ಅದರಲ್ಲಿ ರುದ್ರಗೌಡನ ಆಳ್ವಿಕೆಯಲ್ಲಿ ನಡೆದ ಮುಸ್ಲಿಂ ರಾಣಿಯ ದುರಂತ ಕಥೆಯು ಅಡಗಿದೆ. ಆದರೆ ಇವೆಲ್ಲ ಕಣ್ಣಿಗೆ ಕಾಣೋಷ್ಟು ಸುಲಭವಲ್ಲ ಎಂಬುದನ್ನು ಗಣೇಶಯ್ಯನವರು ಈ ಕಥಾ ಹಂದರದಲ್ಲಿ ನವಿರಾಗಿ ಚಿತ್ರಿಸಿದ್ದಾರೆ. ಇಂಥ ಇನ್ನೂ ಹಲವು ಸತ್ಯದ ಎಲುಬುಗಳನ್ನು ಬಿಡಿಸಿಕೊಳ್ಳುವ ಕೆಲವು ಚರಿತ್ರೆಯ ರೋಚಕ ಕಥೆಗಳನ್ನು ಸೇರಿಸಿ ತಂದಿರುವ ಕಥಾಸಂಕಲನವೇ "ಪದ್ಮಪಾಣಿ".

Like this post? Follow us on Facebook so you never miss out.

ಕಥೆಯ ಒಳ ಹೊಕ್ಕಂತೆಲ್ಲಾ ಘಟನೆಗಳೇ ಕಣ್ಮುಂದೆ ಹಾದು ಹೋಗುವಂತೆ ಭಾಸವಾಗುವುದರ ಜೊತೆಗೆ ಆ ಇತಿಹಾಸ ಪ್ರಸಿದ್ಧ ಕೆತ್ತನಗಳನ್ನು ತಕ್ಷಣವೇ ನೋಡಬೆಕೆನ್ನುವ ಹಂಬಲ ಹೆಚ್ಚುತ್ತದೆ. ಅವೆಲ್ಲವ ನೋಡುತ್ತಾ ಆ ಸತ್ಯ ಚರಿತ್ರೆಯ ಬಿಡಿಸಿ ಒಂದೊಂದು ಕೆತ್ತನೆಗೂ ಅನ್ವಯಿಸಿ ಅವಲೋಕಿಸಿ ಅಲ್ಲಿರದ ಜೀವಂತತೆಯನ್ನು ಕಣ್ತುಂಬಿಕೊಳ್ಳುವ ಮಹದಾಸೆ ಹುಟ್ಟುತ್ತದೆ.


- ಸೌಮ್ಯ ಮಂಡ್ಯ..


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...