ನೋಡಿದ ಅವನು ಹೀಗೆ ನೋಡಿದ,
ಒಣಬೇರಿಗೆ ನೀರೂರುವ ಹಾಗೆ ನೋಡಿದ,
ಕೂಡಿದ ನನ್ನ ಹೇಗೆ ಕೂಡಿದ,
ಹೊಸಚೇತನ ನನ್ನಲಿ ಹರಿವಂತೆ ಕೂಡಿದ,
ನರಳಿದೆ ಆಹಾ ಹೇಗೆ ನರಳಿದೆ,
ಮೈಯ ತುಂಬ ಚಿಗುರು ನಿಮಿರಿದಂತೆ ನರಳಿದೆ,
ಅರಳಿದೆ ಹಿಗ್ಗಿ ಹೇಗೆ ಅರಳಿದೆ,
ಹೂವಿನೋಕುಳಿಯಲಿ ಮಿಂದ ಹಾಗೆ ಅರಳಿದೆ,
ಸುರಿಸಿದ ಒಲವ ಹೇಗೆ ಸುರಿಸಿದ,
ಆಗುಂಬೆಯ ಹುಚ್ಚು ಮಳೆಯ ಹಾಗೆ ಸುರಿಸಿದ,
ಫಲಿಸಿತು ನನ್ನೊಳೇನು ಫಲಿಸಿತು,
ಜೊಂಪೆ ಜೊಂಪೆ ಹಣ್ಣು ತೂಗಿ ಜೀವ ಫಲಿಸಿತು,
ತುಂಬಿತು ಎದೆಯೊಳೇನು ತುಂಬಿತು,
ನೂರು ಹಕ್ಕಿ ಹೈಕಳುಗಳ ಹಾಡು ತುಂಬಿತು,
ಆದೆನು ನಾನು ಏನಾದೆನು,
ಸುತ್ತ ತಂಪು ನೆರಳು ಹರಡಿ ಧನ್ಯಳಾದೆನು.
- ಬಿ. ಆರ್. ಲಕ್ಷ್ಮಣರಾವ್
No comments:
Post a Comment