ಬಾ ಮಳೆಯೇ ಬಾ.. ಅಷ್ಟು ಬಿರುಸಾಗಿ ಬಾರದಿರು
ನಲ್ಲೆ ಬರಲಾಗದಂತೆ;
ಅವಳಿಲ್ಲಿ ಬಂದೊಡನೆ.. ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ;
ನಲ್ಲೆ ಹಿಂತಿರುಗಿ ಹೋಗ ದಂತೆ..
ಓಡು ಕಾಲವೇ ಓಡು.. ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ;
ಅವಳಿಲ್ಲಿ ಬಂದೊಡನೆ.. ನಿಲ್ಲು ಕಾಲವೇ ನಿಲ್ಲು
ತೆಕ್ಕೆ ಸಡಿಲಾಗದಂತೆ;
ನಮ್ಮ ತೆಕ್ಕೆ ಸಡಿಲಾಗದಂತೆ..
ಬೀರು ದೀಪವೇ ಬೀರು.. ನಿನ್ನ ಹೊಂಬಳಕಲ್ಲಿ
ನೋಡುವೆನು ನಲ್ಲೆ ರೂಪ;
ಆರು ಬೇಗನೆ ಆರು.. ಶೃಂಗಾರ ಶಯ್ಯೆಯಲಿ
ನಾಚಿ ನೀರಾಗದಂತೆ;
ನಲ್ಲೆ ನಾಚಿ ನೀರಾಗದಂತೆ..
ಹೋಗು ನಿದ್ದೆಯೇ ಹೋಗು.. ನಿನಗಿಲ್ಲಿ ಎಡೆಯಿಲ್ಲಿ
ಪ್ರೇಮಿಗಳ ಸೀಮೆಯಲ್ಲಿ;
ನಾವೀಗ ಅನಿಮಿಷರು.. ನಮ್ಮ ಈ ಮಿಲನ
ಗಂಧರ್ವ ವೈಭೋಗದಂತೆ;
ಮಿಲನ ಗಂಧರ್ವ ವೈಭೋಗದಂತೆ.
- ಬಿ. ಆರ್. ಲಕ್ಷ್ಮಣರಾವ್
No comments:
Post a Comment