ತೂಗು ಮಂಚದಲ್ಲಿ ಕೂತು
ಕೂತು ಮೇಘ ಶಾಮ ರಾಧೇಗಾತು
ಆಡುತಿಹನು ಏನೋ ಮಾತು
ರಾಧೆ ನಾಚುತ್ತಿದ್ದಳು
ಸೆರಗ ಬೆರಳಿನಲ್ಲಿ ಸುತ್ತಿ
ಜಡೆಯ ತುದಿಯ ಕೆನ್ನೆಗೊತ್ತಿ
ಜುಮ್ಮು ಗುಡುವ ಮುಖವನೆತ್ತಿ
ಕಣ್ಣ ಮುಚ್ಚುತ್ತಿದ್ದಳು
ಮುಖವ ಎದೆಯ ನಡುವೆ ಒತ್ತಿ
ತೋಳಿನಿಂದ ಕೊರಳ ಸುತ್ತಿ
ತುಟಿಯು ತೀಡಿ ಬೆಂಕಿ ಹೊತ್ತಿ
ಕಮ್ಮನುಸಿರ ಬಿಟ್ಟಳು
ಸೆರಗು ಜಾರುತಿರಲು ಕೆಳಗೆ
ಬಾನು ಭೂಮಿ ಮೇಲು ಕೆಳಗೆ
ಅಡರುತ್ತಿರುವ ಅದರಗಳಿಗೆ
ಬೆಳ್ಳಿ ಹಾಲ ಬಟ್ಟಲು..
- ಎಚ್. ಎಸ್. ವೆಂಕಟೇಶಮೂರ್ತಿ
No comments:
Post a Comment