ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ರತ್ನದಂತಹ ಹುಡುಗಿ ಊರಿಗೆಲ್ಲ
ಬಲುಜಾಣೆ ಗಂಭೀರೆ ಹೆಸರು ಸೀತಾದೇವಿ ಹನ್ನೆರಡು ತುಂಬಿಹುದು ಮದುವೆಯಿಲ್ಲ..
ತಾಯಿಯಿಲ್ಲದ ಹೆಣ್ಣು ಮಿಂಚಬೀರುವ ಕಣ್ಣು ಒಮ್ಮೊಮ್ಮೆ ಕಣ್ಣೀರ ಸರಸಿಯಹುದು
ತಾಯಿಯಂದದಿ ಬಂದು ತಂಪನೆರೆಯುವುದೆಂದು ಇಂಥ ಬಾಳಿಗೆ ಒಲವೆ ನಿನ್ನ ಕನಸು ;
ಹತ್ತಿರದ ಕೆರೆಯಿಂದ ತೊಳೆದಬಿ೦ದಿಗೆಯೊಳಗೆ ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ ಅವಳ ಗಂಡನ ಹೆಸರ ಕೇಳಬೇಕು..
ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು ಹೆಣ್ಣ ನೋಡಲು ಬಂದ ಅವರ ಮನೆಗೆ
ವೈದಿಕರ ಮನೆಗಳಲಿ ಊಟ ಹೊತ್ತಾಗುವುದು ಒಲ್ಲೆನೆಂದಳು ಸೀತೆ ಕೋಣೆಯೊಳಗೆ ;
ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ ಒಳಗೆ ನಂದಾದೀಪ ನಂದಿ ಹೋಗಿ
ಫಲವ ನುಡಿದುದು ಹಲ್ಲಿ ಹೇಳಲೇನಿದೆ ಮುಂದೆ ತೆರಳಿದನು ಜೋಯಿಸನು ತಣ್ಣಗಾಗಿ..
ಬೆಳಗಾಗ ಕೆರೆಯ ಬಳಿ ನನ್ನ ತಂಗಿಯ ಕಂಡು ಕನ್ನೆ ತೋರಿದಳಂತೆ ಕಾರಣವನು
ಹೊನ್ನೂರಕೇರಿಯಲಿ ಬಂದಿದ್ದ ಹೊಸ ಗಂಡು ತನ್ನ ಕೂದಲಿಗಿಂತ ಕಪ್ಪು ಎಂದು ;
ನಮ್ಮೂರಿನಕ್ಕರೆಯ ಸಕ್ಕರೆಯ ಬೊ೦ಬೆಯನು ನೋಡಬೇಕೆ ಇಂಥ ಕಪ್ಪುಗಂಡು
ಶಾನುಭೋಗರ ಮನೆಯ ತೋರಣವೆ ಹೇಳುವುದು ಬಂದ ದಾರಿಗೆ ಸುಂಕವಿಲ್ಲವೆಂದು ..
ಶಾನುಭೋಗರ ಮಗಳು ರತ್ನದಂತಹ ಹುಡುಗಿ ಗಂಡುಸಿಕ್ಕುವುದೊಂದು ಕಷ್ಟವಲ್ಲ
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ ತಡವಾದರೆನಂತೆ ನಷ್ಟವಿಲ್ಲ.
- ಕೆ.ಎಸ್. ನರಸಿಂಹಸ್ವಾಮಿ
No comments:
Post a Comment