ರಾತ್ರಿ ಪಾಳಿ ಮುಗಿಸಿದ ದಾದಿ
ಬಸ್ಟಾಪಿನಲ್ಲಿದ್ದಾಳೆ. ಆಗಷ್ಟೆ ಊದಿನ ಕಡ್ಡಿ
ಹಚ್ಚಿಕೊಂಡ ರಿಕ್ಷಾ ಹಾಲಿನವ್ಯಾನು ಹಾದಿವೆ
ಎಮರ್ಜನ್ಸಿಗೆಂದು ಪಜಾಮದಲ್ಲೆ ಬಂದಿದ್ದ ಡಾಕ್ಟ್ರು
ಗೇಟಿನ ಬಳಿ ಹಾರ್ನು ಬಾರಿಸಿ ಹೊರಟಿದ್ದಾರೆ
ಕನಸಿನ ಸುರಂಗಗಳಲ್ಲೂ ಓಡಿ ಓಡಿ ದಣಿದವರು
ರಸ್ತೆ ಬದಿ ಮೆಲ್ಲಗೆ ವಿಗ್ರಹಗಳಂತೆ ಏಳುತ್ತಿದ್ದಾರೆ
ಟಿಫಿನ್ ಕ್ಯಾರಿಯರ್ಗಳು ಹೂವಿನ ಅಂಗಡಿಗಳನ್ನು
ಹಲೋ ಅಂದಿವೆ. ಸೈಕಲ್ ಬೆಲ್ ಗಳು ಕೊಳದೊಳಗಿನ
ಪ್ಲಾಸ್ಟಿಕ್ ಕಮಲಗಳನ್ನ ಕರೀತಿವೆ.
ಸಿಪ್ಪೆಯನ್ನು ಕಿತ್ತಳೆಯೆಂದು ತಿಳಿದು
ಮೋಸ ಹೋಗಿದ್ದಾನೆ ಊದ್ದ ಕಸಬರಿಕೆಯ ವಾರ್ಡ್ ಬಾಯ್.
ಮಚ್ಚರದಾನಿಗೆಂದು ಯಾರೋ ರಾತ್ರಿ
ಆಕಾಶಕ್ಕೆ ಹೊಡೆದ ಮೊಳೆಗಳು ಹಾಗೆ ಇವೆ
ರೆಕ್ಕೆಗಳ ಫಡಫಡಿಸಿ ಮರ
ಕತ್ತಲ ಕೊಡವಿಕೊಳ್ಳುತ್ತಿದೆ
ಎಲ್ಲ ಆಸ್ಪತ್ರೆಗಳ ಬಾಗಿಲು ತೆರೆಯಲಿ
ಜ್ವರದ ಕಣ್ಣಿನ ಮಕ್ಕಳು ನನ್ನ ಮಡಿಲಿಗೆ ಬರಲಿ
ಕಿರಣ ಸೋಕಿದರೆ ಸಾಕು ಮಾಯಲಿ ಗಾಯ
ಒಡೆಯದಿರಲಿ ಕಂಬನಿಗೆ ಎದೆಯ ಹಾಲು.
No comments:
Post a Comment