ಬದಿಯಲ್ಲಿ ಕೂತಿರುವ ಅಪರಿಚಿತ ಪ್ರವಾಸಿ ನಿದ್ದೆ ಹೋಗಿದ್ದಾನೆ
ಬಿಗಿದ ಮೈ ಸಡಿಲಾಗಿ ತಲೆ ವಾಲಿದೆ ನನ್ನ ಹೆಗಲಿಗೆ
ಸ್ವಂತ ನಿದ್ದೆಯಲ್ಲಿ ಎಷ್ಟೊಂದು ನಿರುಪಾಯನಾಗಿದ್ದಾನೆ
ಕೈತುಂಬ ರೋಮಗಳು ಅಲುಗುತ್ತಿವೆ ಬೆಳ್ಳಗೆ
ಗಾಳಿಗೆ ಮುಂಗುರುಳು ತೀಡಿದೆ ಎಣ್ಣೆಗಟ್ಟಿದ ಹಣೆಗೆ
ಕಣ್ಣಬದಿಗೆ ಚೀನಿ ಚಿಕ್ಕದಾಗಿ ಅಲ್ಲಿ ನಿರಿಗೆ ಬೀಳುತ್ತಿರಲೇಬೇಕು
ಮನೆಯಲ್ಲಾಗಿದ್ದರೆ ಉದ್ರಕ್ಕೆ ಮೊಣಕಾಲು ತಂದು
ಎಡಗೈ ಮೇಲೆ ತಲೆಯಿಡುತ್ತಿದ್ದನೆ
ಹೇಗೆ ಅಲುಗುತ್ತಿದೆ ಜೋತ ತುಟಿ ಗಲಗಲ
ತಲೆಗೆ ಅವ್ವ ಎಣ್ಣೆ ಹಾಕುತಿರುವಂತೆ
ಒಂದು ಬೆರಳಿನ ತುದಿಗೆ ಗಂಟುಗಾಯ
ಹೇಗಿರಬಹುದು ಇವನ ದನಿ ಈ ನರೆಗೂದಲಿನಂತೆ
ಅಥವ ಈ ಕಾಲರಿನ ಮೇಲಷ್ಟೆ ತಿಕ್ಕಿ ಇಂಗಿ ಹೋಗಿರುವ
ಅಂಗಿಯ ಚಿತ್ರದಂತೆ
ಹದಿಹರೆಯದಲ್ಲಿ ಉಗ್ಗುತ್ತಿದ್ದನೆ
ಸಾಮಾನು ತರಲು ಮೊದಲ ಸಲ ಒಬ್ಬನನ್ನೇ ಅಂಗಡಿಗೆ
ಕಳಿಸಿದ್ದಾಗ ಹೇಗೆ ತೊದಲಿ ಕಂಪಿಸಿದ
ದೀಪ ಹಚ್ಚುವ ವೇಳೆ ಯಾರನ್ನು ನೆನೆದ
ಒಂದು ಚಪ್ಪಲಿ ಮೆಲ್ಲಗೆ ಬೆರಳಿಂದ ಕಳಚಿಕೊಂಡಿದೆ
ಕಾಲಿನ ಉಗುರುಗಳು ದಪ್ಪಗೆ ಬೆಳೆಯುತ್ತಿವೆ
ದಿಕ್ಕಿಗೊಂದು ದಣಿದ ಅವಯವ ಬಿಟ್ಟು ಹಗುರಾಗಿರುವ
ಈ ನ್ರಾಯುಧನ್ ನಿದ್ದೆಗೆ ಕಾವಲಿದೆ ದೊಡ್ಡದೊಂದು ರೆಕ್ಕೆ
ಇವನ ಈ ಏರಿಳಿವ ಎದೆಯೊಳ್ಗಿನ ಬಿಸಿ ಉಸಿರೆ ಸಾಕು
ಇಡೀ ಈ ಲೋಕವನ್ನು ಬೆಚ್ಚಗಿಡಲಿಕ್ಕೆ
- ಜಯಂತ್ ಕಾಯ್ಕಿಣಿ
(" ನೀಲಿ ಮಳೆ " ಕವನ ಸಂಕಲನದಿಂದ)
No comments:
Post a Comment