Tuesday, November 14, 2017

ಮಡಿಕೇರಿ ಮೇಲ್ ಮಂಜು..


ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಿಕೇರಿ ಮೇಲ್ ಮಂಜು!

ಮಡಗಿದ್ ಅಲ್ಲೇ ಮಡಗಿದ್ದಂಗೆ
ಲಂಗರ್ ಬಿದ್ದಿದ್ ಅಡಗಿದ್ದಂಗೆ
ಸೀತಕ್ ಸಕ್ತಿ ಉಡುಗೋದಂಗೆ
ಅಳ್ಳಾಡಾಲ್ದು ಮಂಜು!
ತಾಯಿ ಮೊಗೀನ್ ಎತ್ಕೊಂಡ೦ಗೆ
ಒಂದಕ್ಕೊಂದು ಅತ್ಕೊ೦ಡ೦ಗೆ
ಮಡಿಕೇರೀನ ಎದೆಗೊತ್ಕೊಂಡಿ
ಜೂಗಾಡ್ತಿತ್ತು ಮಂಜು!

ಮಲಗಾಕ್ ಸೊಳ್ಳೆಪರದೆ ಕಟ್ಟಿ
ಒದಿಯಾಕ್ ಒಗದಿದ್ ದುಬಟಿ ಕೊಟ್ಟಿ
ಪಕ್ದಾಗ್ ಗಂದದ್ ದೂಪ ಆಕ್ದಂಗ್
ಮಡಿಕೇರೀ ಮೇಲ್ ಮಂಜು!
ಮಂಜಿನ್ ಮಸಕಿನ್ ಕಾವಲ್ನಲ್ಲಿ
ಒಣಗಿದ ಉದ್ದಾನೆ ಉಲ್ನಲ್ಲಿ
ಒಳಗೆ ಏನೋ ಸರದೋದಂಗೆ
ಅಲಗಾಡ್ತಿತ್ತು ಮಂಜು!
ನಡಿಯೋ ದೊಡ್ದೊಡ್ ದೇವಲ್ನಂಗೆ
ಪಟ್ಟದ್ ಸುತ್ತಿನ್ ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ
ಗಸ್ತಾಕ್ತಿತ್ತು ಮಂಜು!

ಸೂರ್ಯನ್ ಕರೆಯಾಕ್ ಬಂದ್ ನಿಂತೋರು
ಕೊಡಗಿನ್ ಎಲ್ಲಾ ಪೂವವ್ನೋರು
ತೆಳ್ನೆ ಬೆಳ್ನೆ ಬಟ್ಟೇನಾಕಿ
ಬಂದಂಗಿತ್ತು ಮಂಜು!
ಚಿಮ್ತಾನಿದ್ರ್ ಎಳಬಿಸಿಲಿನ್ ಕೆಂಪು
ಮಂಜಿನ್ ಬಣ್ಣ ಕಣ್ಗೆ ತಂಪು!
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ
ಆಲಿನ್ ಸೌಂದ್ರೀ ಮಂಜು!
ಅಗಲೇ ಬರಲಿ ರಾತ್ರೇ ಬರಲಿ
ಬಿಸಿಲು ನೆರಳು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ ಕೊಡಲ್ದು
ಮಡಿಕೇರೀಗೆ ಮಂಜು!
ತೈಲ ನೀರಿನ್ ಮೇಗಿದ್ದಂಗೆ
ಪೂವಮ್ಮ – ನನ್ ತಂಗೀದ್ದಂಗೆ
ಬಿಟ್ಟೂ ಬಿಡದಂಗ್ ಇಡಕೋ೦ತಿತ್ತು
ಮಡಿಕೇರೀಗೆ ಮಂಜು!

- ಜಿ. ಪಿ. ರಾಜರತ್ನಂ




No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...