ನಿನ್ನ ಪ್ರೀತಿಗೆ, ಅದರ ರೀತಿಗೆ
ಕಣ್ಣ ಹನಿಗಳೆ ಕಾಣಿಕೆ ?
ಹೊನ್ನ ಚಂದಿರ, ನೀಲಿ ತಾರಗೆ
ಹೊಂದಲಾರದ ಹೋಲಿಕೆ..
ನಿನ್ನ ಪ್ರೀತಿಗೆ, ಅದರ ರೀತಿಗೆ
ಚೆಲುವು ಕನಸಿನ ಜವನಿಕೆ..
ಬೆಳ್ಳಿನಿದ್ದೆಯ ತುಟಿಗಳಂಚಿಗೆ
ಸುಳಿದ ಕಿರುನಗೆ ತೋರಿಕೆ..
ತುಂಬಿ ಕೊರೆದಿಹ ಹೂವಿನೆದೆಯಲಿ
ನೋವು ಗಾಳಿಗೆ ಹಾಸಿಗೆ..
ಜೇನು ಜೀವದ ನೆಳಲ ಪೊದೆಯಲಿ
ಗೂಡುಕಟ್ಟಿದೆ ಆಸೆಗೆ..
ತಂತಿಯಾಚೆಗೆ ವೀಣೆ ಮಿಂಚಿದೆ
ಬೆಂಕಿಬೆರಳಿನ ಹಾಡಿಗೆ..
ನಿಟ್ಟುಸಿರ ಪಲ್ಲವಿ ಬೇಲಿಯಾಗಿದೆ
ಚಿಂತೆಯಾಳುವ ಕಾಡಿಗೆ..
ನಗುವ ಮುಖಗಳ ನೋಡಿಬಂದೆನು
ಹಾದಿ ಬೀದಿಯ ಕೆಲದಲಿ..
ನಗದ ಒಂದೇ ಮುಖವ ಕಂಡೆನು
ನನ್ನ ಮನೆಯಂಗಳದಲಿ..
ನೂರು ಕನ್ನಡಿಗಳಲಿ ಕಂಡೆನು
ನೋಡಬಾರದ ಮುಖವನು..
ಇಳಿದ ಮುಖದಿಂಗಿತವನರಿತೆನು
ಅಸುಖ ಮುದ್ರಿತ ಸುಖವನು..
ನಗದ ಮುಖದಲಿ ನಿನ್ನ ಕಂಡೆನು
ತಿಳಿದ ಬಾನಿನ ಹರಹನು..
ಮೊದಲ ಮೋಹದ ಮಂಜು ಕದಲಲು
ಬದುಕು ತುಂಬಿದ ಹಗಲನು..
ನಿನ್ನ ಪ್ರೀತಿಗೆ, ಅದರ ರೀತಿಗೆ
ನೀಡಬಲ್ಲೆನೆ ಕಾಣಿಕೆ?
ಕಾಲವಳಿಸದ ನೆಲದ ಚೆಲುವಿಗೆ
ನಿನ್ನ ಪ್ರೀತಿಯೆ ಹೋಲಿಕೆ..
No comments:
Post a Comment