ಹೂವು ಬಳ್ಳಿಗೆ ದೀಪ;
ಹಸಿರು ಬಯಲಿಗೆ ದೀಪ;
ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ;
ಮುತ್ತು ಕಡಲಿಗೆ ದೀಪ;
ಹಕ್ಕಿ ಗಾಳಿಗೆ ದೀಪ;
ಗ್ರಹತಾರೆಗಳ ದೀಪ ಬಾನಿನಲ್ಲಿ..
ಬಲ್ಮೆ ತೋಳಿಗೆ ದೀಪ;
ದುಡಿಮೆ ಬೆವರಿನ ದೀಪ;
ಸಹನೆ ಅನುಭವ - ದೀಪ ಬದುಕಿನಲ್ಲಿ;
ಮುನಿಸು ಒಲವಿಗೆ ದೀಪ;
ಉಣಿಸು ಒಡಲಿಗೆ ದೀಪ;
ಕರುಣೆ ನಂದಾದೀಪ ಲೋಕದಲ್ಲಿ..
ತೋರಣದ ತಳಿರಲ್ಲಿ;
ಹೊಸಿಲ ಹಣತೆಗಳಲ್ಲಿ;
ಬಾಣಬಿರುಸುಗಳಲ್ಲಿ ನಲಿವು ಮೂಡಿ;
ಕತ್ತಲೆಯ ಪುಟಗಳಲಿ;
ಬೆಳಕಿನಕ್ಷರಗಳಲಿ;
ದೀಪಗಳ ಸಂದೇಶ ಥಳಥಳಿಸಲಿ!!
ಬೆಳಕಿನಸ್ತಿತ್ವವನೆ;
ಅಣಕಿಸುವ ಕತ್ತಲೆಗೆ;
ತಕ್ಕ ಉತ್ತರವಲ್ಲಿ ಕೇಳಿಬರಲಿ;
ದೀಪಾವಳಿಯ ಜ್ಯೋತಿ;
ಅಭಯ ಹಸ್ತವನೆತ್ತಿ;
ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ !!

No comments:
Post a Comment